ನಾಳೆ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್:ರಾಜ್ಯದಲ್ಲಿ ಮುಂಗಾರು ಉತ್ತಮ ಆರಂಭ

Rain
Published on

ಬೆಂಗಳೂರು: ಮುಂಗಾರು ಪ್ರವೇಶಿಸಿದ ದಿನದಿಂದಲೂ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಖುಷಿಯಾಗಿದ್ದು,ಕೃಷಿ ಚಟುವಟಿಕೆಗಳು ಬಿರುಸಾಗಿದೆ.

ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮೆಕ್ಕೆಜೋಳ, ಹಲಸಂದೆ ಸೇರಿ ವಿವಿಧ ಬೀಜ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಕೃಷಿ ಸಂಬಂಧಿಸಿದ ಚಟುವಟಿಕೆಗಳು ಚುರುಕಾಗಿವೆ. ಜೂ 1ರಿಂದ ಜೂ 12ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 63 ಮಿಮೀ ಮಳೆ ಬೀಳುವ ಬದಲು 183 ಮಿಮೀ ಸುರಿದಿದೆ. ವಾಡಿಕೆಗಿಂತ ಶೇ. 67ರಷ್ಟು ಹೆಚ್ಚು ವರ್ಷಧಾರೆಯಾಗಿದೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಸುರಿದರೆ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಬಿದ್ದಿದೆ ಎಂದು ರಾಜ್ಯ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಮೂರು ದಿನ ಮುಂದುವರಿಕೆ:

ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 3 ದಿನ ಮುಂದುವರಿಯಲಿದೆ.ಬಾಗಲಕೋಟೆ, ಕೊಪ್ಪಳ, ಗದಗ,ಕಾರವಾರ, ಹೊನ್ನಾವರ, ಮಂಗಳೂರು ವಿಮಾನ ನಿಲ್ದಾಣ, ಶಿವಮೊಗ್ಗದ ಆಗುಂಬೆ ಕೊಡಗಿನ ಗೋಣಿಕೊಪ್ಪ, ಚಿಕ್ಕಮಗಳೂರಿನ ಮೂಡಗೆರೆ ಸೇರಿ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬುಧವಾರ ವರ್ಷಧಾರೆಯಾಗಿದೆ. ದಣ ಕನ್ನಡ, ಉಡುಪಿಯಲ್ಲಿ ಜೂ 13ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್​ ಅಲರ್ಟ್ ನೀಡಿದೆ. ಈ ಜಿಲ್ಲೆಗಳಲ್ಲಿ ಜೂ.14ರಿಂದ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಇರಲಿದೆ. ಉತ್ತರ ಕನ್ನಡದಲ್ಲಿ ಮುಂದಿನ ಮೂರು ದಿನ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮುಂದಿನ 2 ದಿನ, ಗದಗ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲಿಯೂ ಜೂ 13ರಂದು ಯೆಲ್ಲೋ ಅಲರ್ಟ್​ ಇರಲಿದೆ. ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net