

ಯಲ್ಲಾಪುರ: ತಾಲೂಕಿನ ಮಾಗೋಡ ಭಾಗದಲ್ಲಿ ಕೆಲ ತಿಂಗಳುಗಳ ನಂತರ ಮತ್ತೆ ಹುಲಿ ದಾಳಿ ನಡೆಸಿದ್ದು, ಮಂಗಳವಾರ ರಾತ್ರಿ ಹೆಬ್ಬಾರಮನೆಯಲ್ಲಿ ಆಕಳ ಕರುವೊಂದನ್ನು ಕೊಂದಿದೆ. ಹೆಬ್ಬಾರಮನೆಯ ನಾಗೇಶ ಗೋಪಾಲ ಭಾಗ್ವತ ಅವರ ಕೊಟ್ಟಿಗೆಗೆ ನುಗ್ಗಿ ಕರುವನ್ನು ಕೊಂದು ಹಾಕಿದೆ.
ಬೋನು ಇಟ್ಟು ಹುಲಿ ಹಿಡಿಯಲು ಆಗ್ರಹ: ನಂದೊಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾಗೋಡ, ದೇವರಗದ್ದೆ, ತೊಂಡೆಕೆರೆ ಭಾಗದಲ್ಲಿ ಹುಲಿಯ ಉಪಟಳ ಮತ್ತೆ ಹೆಚ್ಚಿದ್ದು, ಸಾಕುಪ್ರಾಣಿಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿದೆ. ಕಾರಣ ಅರಣ್ಯ ಇಲಾಖೆಯವರು ಬೋನು ಇಟ್ಟು ಹುಲಿಯನ್ನು ಹಿಡಿದು ಬೇರೆಡೆ ಸಾಗಿಸಬೇಕೆಂದು ಗ್ರಾ.ಪಂ. ಅಧ್ಯಕ್ಷ ನರಸಿಂಹ ಕೋಣೆಮನೆ ಅರಣ್ಯ ಇಲಾಖೆಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಮಾಗೋಡ, ದೇವರಗದ್ದೆ ಭಾಗದಲ್ಲಿ ಪ್ರತಿ ದಿನ ಹುಲಿ ಕಾಣಿಸಿಕೊಳ್ಳುತ್ತಿದ್ದು, ಸಾಕುಪ್ರಾಣಿಗಳನ್ನು ಕೊಲ್ಲುತ್ತಿದೆ. ಗ್ರಾಮಸ್ಥರು ಓಡಾಡಲೂ ಭಯ ಪಡುವಂತಾಗಿದೆ. ಈ ಕುರಿತು ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ದೂರಿದ್ದಾರೆ. ಅರಣ್ಯ ಇಲಾಖೆಯವರು ಹುಲಿ ಓಡಾಡುವ ಪ್ರದೇಶದಲ್ಲಿ ಬೋನು ಇಟ್ಟು, ಅದನ್ನು ಸೆರೆಹಿಡಿಯುವ ಮೂಲಕ ಸಾಕು ಪ್ರಾಣಿಗಳಿಗೆ ಹಾಗೂ ಸ್ಥಳೀಯರಿಗೆ ರಕ್ಷಣೆ ನೀಡಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.