

ಇಂಡಿ: ಸಮೀಪದ ಹಿರೇಮಣೂರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಜಾತ್ರೆ ಮೇ 10 ರಿಂದ 16ರ ವರೆಗೆ ನಡೆಯಲಿದೆ.
ಮೇ 10 ರಂದು ಸಂಜೆ ಶಿವಬಾಳನಗರದ ಭಕ್ತರಿಂದ ನಂದಿಕೋಲ ಮೆರವಣಿಗೆ ನಡೆಯಲಿದೆ. ಮೇ 11 ರಂದು ರಾತ್ರಿ 9 ಗಂಟೆಗೆ ಯಲ್ಲಮ್ಮದೇವಿ ಬಾಸಿಂಗ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತೆರಳಲಿದೆ. ರಾತ್ರಿ 10.30ಕ್ಕೆ ಪ್ರೇಮಾ ಅಜಲಪುರ ಹಾಗೂ ಸಂಗಡಿಗರಿಂದ ಚೌಡಕಿ ಪದಗಳ ಗಾಯನ ನಡೆಯಲಿದೆ.
ಮೇ 12 ರಂದು ಬೆಳಗ್ಗೆ 5ಕ್ಕೆ ಪಡಸಾವಳಗಿ ಮಠದ ಡಾ. ಶಂಭುಲಿಂಗ ಶಿವಾಚಾರ್ಯರು ದೇವಿಯ ರುದ್ರಾಭಿಷೇಕ ನೆರವೇರಿಸುವರು. ಬೆಳಗ್ಗೆ ವಸ್ತಾಭರಣ, 9ಕ್ಕೆ ದೇವಿಗೆ ನೈವೇದ್ಯ ಅರ್ಪಣೆ, ಪಲ್ಲಕ್ಕಿ, ಬಾಸಿಂಗ್ ಮೆರವಣಿಗೆೆ, ದೇವಿ ಪಲ್ಲಕ್ಕಿಗೆ ಸ್ವಾಗತಿಸಲಾಗುತ್ತಿದೆ. ಬಳಿಕ ಮದ್ದು ಸುಡುವ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿನ ದೇವಿ ಮಂದಿರಕ್ಕೆ ಆಗಮಿಸಲಿದೆ.
ಮೇ 12 ರಿಂದ 16ರ ವರೆಗೆ ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನ ಬಳಿ ಜಾನುವಾರುಗಳಿಗೆ ಹಾಗೂ ಕುರಿಗಳ ಭವ್ಯ ಜಾತ್ರೆ ನಡೆಯಲಿದೆ. ಮೇ 13 ರಂದು ಬೆಳಗ್ಗೆ 9ಕ್ಕೆ ಸುರೇಶ ಕಂಬಾಗಿ, ರೇಖಾ ಗೊಲಬಾವಿ ಅವರಿಂದ ಗೀ ಗೀ ಪದಗಳ ಕಾರ್ಯಕ್ರಮ, ಜಂಗಿ ಕುಸ್ತಿಗಳು ನಡೆಯಲಿವೆ.
ಜಾನುವಾರು ಜಾತ್ರೆಯಲ್ಲಿ ಉತ್ತಮ ಜಾನುವಾರುಗಳಿಗೆ ಯಲ್ಲಮ್ಮ ದೇವಿ ಟ್ರಸ್ಟ ಕಮಿಟಿ ವತಿಯಿಂದ 16 ರಂದು ಬಹುಮಾನ ವಿತರಿಸಲಾಗುವದು ಎಂದು ಯಲ್ಲಮ್ಮ ದೇವಿಯ ಚಾರಿಟೇಬಲ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.