

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಭೂಸಪ್ಪ ಚೌಕ್ ಬಳಿಯ ಕುರುಬರ ಓಣಿಯ ಶ್ರೀ ಯಲ್ಲಮ್ಮದೇವಿ, ಬೀರಲಿಂಗೇಶ್ವರ ಮತ್ತು ವಿಠ್ಠಲ ರುಕ್ಮಿಣಿ ದೇವರ ಜಾತ್ರಾ ಮಹೋತ್ಸವದ 2ನೇ ದಿನವಾದ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮೂರು ವರ್ಷಕ್ಕೊಮ್ಮೆ ನಡೆಯುತ್ತಿರುವುದರಿಂದ ಓಣಿಯ ಎಲ್ಲ ಸಮುದಾಯದ ಬಾಂಧವರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಸಂಪ್ರದಾಯದ0ತೆ ದೇವಿಯರಿಗೆ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಬೆಳಗ್ಗೆ 5 ಗಂಟೆಗೆ ಮಹಾರುದ್ರಾಭಿಷೇಕ ಮತ್ತು ಬ್ರಹ್ಮದೇವರ ಪೂಜೆ ನೆರವೇರಿಸಲಾಯಿತು. ಡೊಳ್ಳಿನ ಪದ ಜಾತ್ರೆಯ ವಿಶೇಷತೆಗಳಲ್ಲೊಂದು. ಬೇರೆ ಬೇರೆ ಗ್ರಾಮಗಳಿಂದ ಬಂದ ಡೊಳ್ಳು ಮಜಲುಗಳು, ಪಲ್ಲಕ್ಕಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ರಾತ್ರಿ ಡೊಳ್ಳಿನ ಪದ ಭಜನೆಯಲ್ಲಿ ತೊಡಗುವುದರೊಂದಿಗೆ ಬೀರಲಿಂಗೇಶ್ವರನ ಪೂಜೆ ನೆರವೇರಿಸಲಾಯಿತು. ರಾತ್ರಿ ನಡೆದ ಡೊಳ್ಳಿನ ಮಜಲು ಡೊಳ್ಳಿನ ಪದಗಳ ಗಾಯನ ಜನಮನ ಸೆಳೆಯಿತು.
18ರಂದು ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಮಂಗಲವಾದ್ಯ ವೈಭವದೊಂದಿಗೆ ಶ್ರೀ ಯಲ್ಲಮ್ಮ, ಬೀರಲಿಂಗೇಶ್ವರ ದೇವಲ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಲಿದೆ. ರಾತ್ರಿ ಡೊಳ್ಳಿನ ಪದಗಳು ಪ್ರಸ್ತುತಿ ಇರಲಿದೆ. 19ರಂದು ಬೆಳಗ್ಗೆ 9ಕ್ಕೆ ಭಂಡಾರ ಒಡೆಯುವ ಕಾರ್ಯಕ್ರಮ, ಮಹಾಪೂಜೆಯೊಂದಿಗೆ ಜಾತ್ರೆ ಸಂಪನ್ನವಾಗಲಿದೆ ಎಂದು ಶ್ರೀ ಯಲ್ಲಮ್ಮ ದೇವಿ, ಬೀರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.