ಸಮುದಾಯಗಳ ಜಾಗೃತಿಗಾಗಿ ವಾಲ್ಮೀಕಿ ಜಾತ್ರೆ

preliminary meeting
ಯಲಬುರ್ಗಾದಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ವಾಲ್ಮೀಕಿ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಪ್ರಮುಖರಾದ ಕೆ.ಎನ್.ಪಾಟೀಲ್, ಫಕೀರಪ್ಪ ತಳವಾರ, ಮಾನಪ್ಪ ಪೂಜಾರ, ಟಿ.ರತ್ನಾಕರ, ರಾಮಣ್ಣ ತಳವಾರ, ಚನ್ನಬಸವ ಕುಲಕರ್ಣಿ, ಕಳಕಪ್ಪ ತಳವಾರ, ಶಂಕರಗೌಡ ಸಾಲಭಾವಿ ಇದ್ದರು.
Published on

ಯಲಬುರ್ಗಾ: ಶತಮಾನಗಳಿಂದ ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಸಮುದಾಯಗಳ ಜಾಗೃತಿಗಾಗಿ ವಾಲ್ಮೀಕಿ ಜಾತ್ರೆ ನಡೆಸಲಾಗುತ್ತದೆ ಎಂದು ಹರಿಹರ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಹರಿಹರದಲ್ಲಿ ಫೆ.8, 9ರಂದು ನಡೆಯುವ 7ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ವಾಲ್ಮೀಕಿ ಜಾತ್ರೆ ಸಾಂಪ್ರದಾಯಿಕವಾಗಿರದೆ ಜನಜಾಗೃತಿ ಮೂಡಿಸುವ ಜತೆಗೆ ವೈಚಾರಿಕ ಜಾತ್ರೆ ಇದಾಗಿದೆ. ಮಠದ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಲಿಂ.ಪುಣ್ಯಾನಂದಪುರಿ ಸ್ವಾಮಿಗಳ 18ನೇ ವರ್ಷದ ಪುಣ್ಯಾರಾಧನೆ, ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿಗಳ 17ನೇ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ವೈಚಾರಿಕ ಆಶಯಗಳನ್ನು ಜನರಿಗೆ ತಿಳಿಸಲು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜಾತ್ರೆಗೆ ಕರೆಯಲಾಗುತ್ತಿದೆ ಎಂದರು.

ಸಮುದಾಯದವರು ಸಂಘಟಿತರಾಗಬೇಕು. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು. ನಿಮ್ಮ ಜತೆಗೆ ಸೋದರ ಸಮುದಾಯದರವನ್ನು ಕರೆತರಬೇಕು ಎಂದು ಕೋರಿದರು.

ಇದೆ ವೇಳೆ ವಾಲ್ಮೀಕಿ ಜಾತ್ರಾ ಮಹೋತ್ಸವದ ತಾಲೂಕು ಸಮಿತಿ ಅಧ್ಯಕ್ಷರನ್ನಾಗಿ ಫಕೀರಪ್ಪ ತಳವಾರ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ್, ತಾಲೂಕು ಅಧ್ಯಕ್ಷ ಮಾನಪ್ಪ ಪೂಜಾರ, ಮುಖಂಡರಾದ ಟಿ.ರತ್ನಾಕರ, ರಾಮಣ್ಣ ತಳವಾರ, ಚನ್ನಬಸವ ಕುಲಕರ್ಣಿ, ಕಳಕಪ್ಪ ತಳವಾರ, ಶಂಕರಗೌಡ ಸಾಲಭಾವಿ, ಹಂಚಾಳಪ್ಪ ಪೂಜಾರ, ಹನುಮಂತಪ್ಪ ತಳವಾರ, ಹನುಮಗೌಡ ಗಾಣಧಾಳ, ದ್ಯಾಮಪ್ಪಗೌಡ್ರ, ಚನ್ನಬಸವ ಗುಮಗೇರಿ, ಕಳಕಪ್ಪ ತಳವಾರ, ಶರಣಪ್ಪ ಹುಣಸಿಹಾಳ, ಕಳಕಪ್ಪ ಹಿರೇಮ್ಯಾಗೇರಿ, ಹನುಮಗೌಡ ಕೋರಿ, ಗುಂಡನಗೌಡ ಸಾಲಭಾವಿ, ಯಮನೂರಪ್ಪ ತಳವಾರ, ಸುರೇಶಗೌಡ ನಿಲೋಗಲ್, ಶರಣಗೌಡ ಮಾಟಲದಿನ್ನಿ ಇತರರಿದ್ದರು.

ಜಾತಿ ಹೆಸರಿನಲ್ಲಿ ಮೋಸ ಸಲ್ಲ: ಸೋದರ ಸಮುದಾಯಗಳು ಈಗಲೂ ಶೋಚನೀಯ ಸ್ಥಿತಿಯಲ್ಲಿವೆ. ಅವರನ್ನು ಸಹ ನಮ್ಮೊಂದಿಗೆ ಕರೆದೊಯ್ಯಬೇಕಿದೆ. ಜಾತಿ ಕಾರಣಕ್ಕಾಗಿ ಊರಾಚೆ ಇಡಲಾಗಿದ್ದ ನಮ್ಮ ಸಮುದಾಯಗಳನ್ನು ಗುರುತಿಸಿದ ಡಾ.ಅಂಬೇಡ್ಕರ್, ಸಂವಿಧಾನದ ಮೂಲಕ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಉಳಿದಂತೆ ಕಡೆಗಣಿಸುತ್ತಾರೆ. ಹಣ ಮತ್ತು ಹೆಂಡ ಕೊಟ್ಟರೆ ಮತ ಹಾಕುತ್ತಾರೆ ಎಂಬ ಮನಸ್ಥಿತಿ ಅವರದ್ದಾಗಿದೆ. ಈ ಕಾರಣಕ್ಕೆ ಜಾತಿ ಹೆಸರಿನಲ್ಲಿ ಮೋಸ ಮಾಡುವ ರಾಜಕೀಯ ಪಕ್ಷಗಳು, ನಮ್ಮವರಿಂದಲೇ ನಮ್ಮನ್ನು ತುಳಿಯುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net