ಅವಿಶ್ವಾಸ ಮಂಡನೆಗೆ ಕೋರ್ಟ್ ತಡೆ

Yelburga pattana panchayat president meeting cancel
ಯಲಬುರ್ಗಾ ಪಪಂ ಕೋಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಅವಿಶ್ವಾಸ ಸಭೆ ರದ್ದು ಮಾಡಿ ಪ್ರಕಟಣೆ ಹೊರಡಿಸಿರುವುದು.
Published on

ಯಲಬುರ್ಗಾ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಮಾ.11 (ಮಂಗಳವಾರ) ನಿಗದಿಯಾಗಿದ್ದ ಅವಿಶ್ವಾಸ ಮಂಡನೆ ಸಭೆಗೆ ಧಾರವಾಡದ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಸಭೆ ಮುಂದೂಡಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ವಿರುದ್ಧ ಸ್ವ ಪಕ್ಷದವರಾದ ಬಿಜೆಪಿ ಸದಸ್ಯರು ಅವಿಶ್ವಾಸ ಮಂಡನೆಗೆ ಮನವಿ ಸಲ್ಲಿಸಿದರು. ಹೀಗಾಗಿ ಮಂಗಳವಾರ ಸಭೆ ನಿಗದಿ ಮಾಡಲಾಗಿತ್ತು. ಆದರೆ ಹಾಲಿ ಅಧ್ಯಕ್ಷ ಅಂದಯ್ಯ ಅವರು ಧಾರವಾಡದ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಬಿಜೆಪಿ ಸದಸ್ಯರಿಗೆ ನಿರಾಸೆ ಮೂಡಿಸಿದೆ.

15 ಸದಸ್ಯ ಬಲದ ಪಂಚಾಯಿತಿಯಲ್ಲಿ ಬಿಜೆಪಿ 11, ಕಾಂಗ್ರೆಸ್‌ನ ನಾಲ್ವರು ಸದಸ್ಯರಿದ್ದಾರೆ. ಆದರೀಗ ಬಿಜೆಪಿ ಅಧ್ಯಕ್ಷ ಅಂದಯ್ಯ ವಿರುದ್ಧ ಸ್ವಪಕ್ಷದವರೇ ತಿರುಗಿಬಿದ್ದಿದ್ದು, 11 ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು. ಅಧ್ಯಕ್ಷರು ಸಭೆಗೆ ತಡೆಯಾಜ್ಞೆ ತಂದಿರುವುದು ಸದಸ್ಯರ ಮನವಿಗೆ ಕೋರ್ಟ್ ತಣ್ಣೀರು ಎರಚಿದೆ.

ಬಿಜೆಪಿ ನಾಯಕರು ಗಪ್ ಚುಪ್: ಪಕ್ಷದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ತಾಲೂಕು ಅಧ್ಯಕ್ಷರಾಗಲಿ ಅಥವಾ ಮಾಜಿ ಸಚಿವ ಹಾಲಪ್ಪ ಆಚಾರ್ ಆಗಲಿ ಭಿನ್ನಾಭಿಪ್ರಾಯ ತಣಿಸಲು ಮುಂದಾಗುತ್ತಿಲ್ಲ. ಇದು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಪಕ್ಷದಲ್ಲಿ ಗೊಂದಲ ಉಂಟಾಗಿರುವುದನ್ನು ಎಲ್ಲ ಹಿರಿಯ ಮುಖಂಡರು ಸರಿಪಡಿಸಲಿ. ಗಮನಕ್ಕೆ ಇದ್ದರೂ ಸುಮ್ಮನಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಸಮಸ್ಯೆ ಮುಂದುವರಿಯದಂತೆ ನೋಡಿಕೊಂಡು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿ ಪಕ್ಷಕ್ಕಾಗುವ ಹಾನಿ ತಪ್ಪಿಸಬೇಕು ಎನ್ನುವುದು ಕಾರ್ಯಕರ್ತರ ಮಾತಾಗಿದೆ.

ಅಧಿಕಾರ ವಹಿಸಿಕೊಂಡು ಆರು ತಿಂಗಳಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಪ್ರತಿ ವಾರ್ಡ್ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ ಸದಸ್ಯರು ಯಾವ ಸಭೆಗೂ ಹಾಜರಾಗುತ್ತಿಲ್ಲ. ಹೀಗಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅದಕ್ಕೆ ನಾನು ಕಾರಣನಲ್ಲ. | ಅಂದಯ್ಯ ಕಳ್ಳಿಮಠ ಪಪಂ ಅಧ್ಯಕ್ಷ, ಯಲಬುರ್ಗಾ

ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಂಗಳವಾರ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ ನಿಗದಿಯಾಗಿತ್ತು. ಆದರೆ ಧಾರವಾಡದ ಉಚ್ಚ ನ್ಯಾಯಾಲಯದಿಂದ ಹಾಲಿ ಅಧ್ಯಕ್ಷರು ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಅವಿಶ್ವಾಸ ಮಂಡನೆ ಸಭೆ ಮುಂದೂಡಲಾಗಿದೆ. | ನಾಗೇಶ ಪಪಂ ಮುಖ್ಯಾಧಿಕಾರಿ, ಯಲಬುರ್ಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net