ಕನಿಷ್ಠ ವೇತನ ಜಾರಿ ಮಾಡಿ

UNTILETED 4
Published on

ಯಲಬುರ್ಗಾ: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೈಬಿಡಲು ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರ ಸಂಘಟನೆಗಳು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದವು.

ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಲಲಿತಾ ಅರಳಿ ಮಾತನಾಡಿ, ಅಂಗನವಾಡಿ ನೌಕರರು ಆಯ್‌ಸಿಡಿಎಸ್ ಯೋಜನೆಯಡಿ ಕಳೆದ 50 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರೂ ಕಾಯಂಗೊಳಿಸಿಲ್ಲ. ಜತೆಗೆ ಕನಿಷ್ಠ ವೇತನ ನೀಡುತ್ತಿಲ್ಲ. ಇದರಿಂದ ನೌಕರರ ಬದುಕು ಅತಂತ್ರವಾಗಿದೆ. ಆಯ್‌ಸಿಡಿಎಸ್ ಯೋಜನೆ ಸೌಲಭ್ಯಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದು, ಇದರಿಂದ ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಎಫ್‌ಆರ್‌ಎಸ್ ವ್ಯವಸ್ಥೆಯಿಂದ ನೌಕರರಿಗೆ ಒತ್ತಡ ಉಂಟಾಗುತ್ತಿದೆ. ನೌಕರರ ಹಿತದೃಷ್ಟಿಯಿಂದ ತ್ವರಿತ ಗತಿಯಲ್ಲಿ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಆನ್‌ಲೈನ್‌ನಲ್ಲಿ ಮಾಹಿತಿ ಕೇಳಲಾಗುತ್ತಿದ್ದು, ವ್ಯವಸ್ಥಿತ ಮೊಬೈಲ್ ಹಾಗೂ ಇಂಟರ್‌ನೆಟ್ ವ್ಯವಸ್ಥೆ ಇಲ್ಲದಂತಾಗಿದೆ ಎಂದು ಎಂದು ಒತ್ತಾಯಿಸಿದರು.

ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ವಾಲ್ಮೀಕಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ. ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಾರಕ ನಿರ್ಣಯಗಳನ್ನು ಕೈಬಿಟ್ಟು ನೌಕರರ ಹಿತ ಕಾಪಾಡಬೇಕು. ಸೇವಾ ಹಿರಿತನದ ಮೇಲೆ ಮುಂಬಡ್ತಿ ನೀಡಬೇಕು. ದಿನಗೂಲಿ ನೌಕರರಾಗಿ ಹಾಗೂ ಗೌರವಧನ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ ವ್ಯವಸ್ಥೆ ಜಾರಿಗೊಳಿಸಬೇಕು. ನೌಕರರಿಗೆ ಸೇವಾ ಭದ್ರತೆ ಒದಗಿಸಿ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಿ ಎಂದು ಒತ್ತಾಯಿಸಿದರು. ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net