

ಯಲಬುರ್ಗಾ: ನಿವೃತ್ತ ನೌಕರರ ಪಿಂಚಣಿ ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರಾಕರಿಸಿರುವುದನ್ನು ಖಂಡಿಸಿ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ವಿರುಪಣ್ಣ ಹೊರಪೇಟಿ ಮೂಲಕ ಕೇಂದ್ರಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕುರಿ ಮಾತನಾಡಿ, ಸರ್ಕಾರಿ ಸೇವೆಯಿಂದ ನೌಕರರ ನಿವೃತ್ತಿ ಹೊಂದಿದಾಗ ಅವರಿಗೆ ಹಳೇ ಪಿಂಚಣಿ ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಳ್ಳುತ್ತಿದೆ.
ಇದರಿಂದ ನಿವೃತ್ತ ನೌಕರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೊಳಗಾಗುತ್ತವೆ. ಕೂಡಲೇ ಪಿಂಚಣಿ ಪರಿಷ್ಕರಿಸಿ ನಿವೃತ್ತ ನೌಕರರಿಗೂ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಚಿನ್ನುಸಾ ರಾಯಬಾಗಿ ಮಾತನಾಡಿ, ಪಿಂಚಣಿ ರಚನೆಯಲ್ಲಿ ಪ್ರಮುಖ ಬದಲಾವಣೆ ತರುವ ಹಣಕಾಸು ಕಾಯ್ದೆ-2025ನ್ನು ಸಂಸತ್ ಅನುಮೋದಿಸಿದೆ. ಹೊಸ ಕಾನೂನಿನ ಪ್ರಕಾರ, ಪಿಂಚಣಿದಾರರು ಭವಿಷ್ಯದ ವೇತನ ಆಯೋಗದ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ ಎಂಬ ಕಾನೂನು ನಿವೃತ್ತ ನೌಕರರಿಗೆ ಸಂಕಷ್ಟ ತಂದೊಡ್ಡಿದೆ. ಕೂಡಲೇ ಪಿಂಚಣಿ ಪರಿಷ್ಕ್ಕರಿಸಿ ನಿವೃತ್ತ ನೌಕರರಿಗೆ ಅನುಕೂಲ ಕಲ್ಪಿಸಲು ಪ್ರಧಾನಮಂತ್ರಿ ಹಾಗೂ ಆರ್ಥಿಕ ಸಚಿವರು ಕ್ರಮವಹಿಸಬೇಕೆಂದು ಮನವಿ ಮಾಡಿದರು.