ತಡೆಯಾಜ್ಞೆ ತೆರವಿಗೆ ಮಧ್ಯಸ್ಥಿಕೆವಹಿಸಿ

ylb photo 01
ಯಲಬುರ್ಗಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ, ತಾಪಂ ಇಒ ಸಂತೋಷ ಪಾಟೀಲ್, ಬಿಇಒ ಅಶೋಕ ಗೌಡರ, ನಿಂಗನಗೌಡ ಪಾಟೀಲ್, ಪ್ರಮುಖರಾದ ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ ಇತರರಿದ್ದರು.
Published on

ಯಲಬುರ್ಗಾ: ಕೃಷ್ಣಾ ಬಿ ಸ್ಕೀಂ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ತಡೆಯಾಜ್ಞೆ ತೆರವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಪರಿಹಾರಕ್ಕೆ ಮುಂದಾಗಬೇಕಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಡೆಯಾಜ್ಞೆ ತೆರವುಗೊಳಿಸುವುದಕ್ಕೆ ವಿಳಂಬ ಮಾಡಿದರೆ ಯೋಜನಾ ವೆಚ್ಚ ಗಣನೀಯ ಏರಿಕೆಯಾಗಲಿದೆ. ಶೀಘ್ರ ಯೋಜನೆಯನ್ನು ಪ್ರಾರಂಭಿಸಿದರೆ 2 ಲಕ್ಷ ಕೋಟಿ ರೂ. ಅನುದಾನ ಅಗತ್ಯವಿದೆ. ಹೀಗಾಗಿ ಈ ವಿಷಯದಲ್ಲಿ ರಾಜಕಾರಣ ಮುಂದಿಟ್ಟು ಅನಗತ್ಯ ವಿಳಂಬ ಮಾಡುವುದು ಸರಿಯಲ್ಲ ಎಂದರು.

371ಜೆ ಕಲಂ ತಿದ್ದುಪಡಿಯಿಂದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಸಾಕಷ್ಟು ಅನುಕೂಲವಾಗಿದೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು.

ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿ ಕಳಪೆ ಕಾಮಗಾರಿಗಳನ್ನು ತಡೆಯಲು ಮುಂದಾಗಬೇಕು.

ಕ್ಷೇತ್ರದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಉತ್ತಮ ಗುಣಮಟ್ಟದ ಡೆಸ್ಕ್‌ಗಳನ್ನು ಪೂರೈಸಲು ಶೀಘ್ರದಲ್ಲೇ ಕ್ರಮ ವಹಿಸಲಾಗುವುದು. ಈ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದರು.

ಅಣಗವಿಕಲರಿಗೆ ವ್ಹೀಲ್‌ಚೇರ್ ವಿತರಿಸಲಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪಟ್ಟಣದ ವಿಜಯ ದುರ್ಗಾದೇವಿ ದೇವಸ್ಥಾನದ ಎದುರಿಗೆ ಕೆಎಂಎಫ್‌ನ ನಂದಿನಿ ಮಿಲ್ಕ್ ಪಾರ್ಲರನ್ನು ಶಾಸಕ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net