ಪ್ರತಿಯೊಬ್ಬರೂ ಆರೋಗ್ಯದತ್ತ ಗಮನ ಹರಿಸಲಿ

Yelaburga Quiz Competition
ಯಲಬುರ್ಗಾದ ಹಿರೇಅರಳಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆಗಳ ಕುರಿತು ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು.
Published on

ಯಲಬುರ್ಗಾ: ಆರೋಗ್ಯ ಇಲಾಖೆಯ ವಿವಿಧ ರಾಷ್ಟ್ರೀಯ ಯೋಜನೆಗಳಡಿ ರೋಗಗಳ ನಿಯಂತ್ರಣದ ಮುಂಜಾಗ್ರತೆ ಕ್ರಮ ವಹಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿ.ಪಿ.ಶಿವಾನಂದ ಹೇಳಿದರು.

ತಾಲೂಕಿನ ಹಿರೇಅರಳಿಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆರೋಗ್ಯ ಯೋಜನೆಗಳ ಕುರಿತ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಆರೋಗ್ಯದ ಗಮನ ಹರಿಸಬೇಕು. ಸೇವಿಸುವ ಆಹಾರ ಹಾಗೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಕುಷ್ಠರೋಗ ನಿರ್ಮೂಲನೆ, ಆರ್‌ಸಿಎಚ್, ರಾಷ್ಟ್ರೀಯ ಶ್ರವಣದೋಷ ನಿವಾರಣೆ, ಹದಿಹರೆಯದವರ ಆರೋಗ್ಯದ ಮಹತ್ವ, ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ, ಕುಟುಂಬ ಕಲ್ಯಾಣ, ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ, ಐಡಿಎಸ್ಪಿ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು ತಿಳಿಸಿದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಅಬ್ಬಕ್ಕ ರಾಣಿ ತಂಡ ಪ್ರಥಮ, ಕಿತ್ತೂರು ರಾಣಿ ಚನ್ನಮ್ನ ತಂಡ ದ್ವಿತೀಯ, ಇಮ್ಮಡಿ ಪುಲಿಕೇಶಿ ತಂಡ ತೃತೀಯ ಸ್ಥಾನ ಗಳಿಸಿದರು. ಬಹುಮಾನದ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಆಯೋಜಕರು ತಿಳಿಸಿದರು.

ಪ್ರಾಚಾರ್ಯ ದೊಡ್ಡಪ್ಪ ತಳವಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಯ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೋಭಾ ಪತ್ತಾರ, ಸಿಎಚ್‌ಒ ಬಸವರಾಜ, ಪ್ರಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net