

ಯಲಬುರ್ಗಾ; ಶಿಕ್ಷಣದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ತರಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ದಮ್ಮೂರು ಗ್ರಾಮದಲ್ಲಿ ಪ್ರೌಢಶಾಲೆ ಶಂಕುಸ್ಥಾಪನೆ ಹಾಗೂ ಪ್ರಾಥಮಿಕ ಶಾಲಾ ಕೊಠಡಿಗಳ ಉದ್ಘಾಟನೆ ನೇರವೇರಿಸಿ ಬುಧವಾರ ಮಾತನಾಡಿದರು. ತಾಲೂಕಿನಲ್ಲಿ 52 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಪೈಕಿ 41 ಸಾವಿರ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಕಳೆದ ಸಾಲಿನಲ್ಲಿ 35 ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸಲಾಗಿತ್ತು. ಅದರಂತೆ ಈ ಸಾಲಿನಲ್ಲೂ ಹೊಸದಾಗಿ 35 ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲಾಗಿದೆ. ಅಕ್ಷರ ಆವಿಷ್ಕಾರ ಕಾರ್ಯಕ್ರಮದಡಿ 25 ಕೋಟಿ ರೂ. ಅನುದಾನದ ಮೂಲಕ ತಾಲೂಕಿನ ಎಲ್ಲ ಶಾಲೆಗಳಿಗೆ ಸಾಮಗ್ರಿ ನೀಡಲಾಗುವುದು ಎಂದರು.
ಈ ಬಾರಿ 16 ಪ್ರೌಢಶಾಲೆ ಮಂಜೂರು ಮಾಡಿಸಲಾಗಿದೆ. ಒಟ್ಟು 64 ಪ್ರೌಢಶಾಲೆಗಳು ತಾಲೂಕಿನಲ್ಲಿವೆ. ಇದು ರಾಜ್ಯದಲ್ಲಿಯೇ ಹೆಚ್ಚು ಎನ್ನಬಹುದು. ಇನ್ನೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ತಂದು ತಾಲೂಕನ್ನು ಅಭಿವೃದ್ಧಿಪಡಿಸಲು ಸಿದ್ಧ ಎಂದರು.
ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಇಒ ಸಂತೋಷ ಪಾಟೀಲ ಬಿರಾದಾರ, ಬಿಇಒ ಸೋಮಶೇಖರ್ ಪಾಟೀಲ, ಪಿಡಬ್ಲುೃಡಿ ಎಇಇ ಬಸವರಾಜ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಮುಖಂಡರಾದ ವೀರನಗೌಡ ಪೊಲೀಸ್ ಪಾಟೀಲ, ರೇವಣೆಪ್ಪ ಸಂಗಟಿ, ಡಾ.ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ರಸೂಲಸಾಬ ದಮ್ಮೂರ ಇತರರಿದ್ದರು.