16 ಪ್ರೌಢ ಶಾಲೆಗಳು ಮಂಜೂರು

Untitled design(7)
Published on

ಯಲಬುರ್ಗಾ: ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಶಾಸಕ ಬಸವರಾಜ ರಾಯರೆಡ್ಡಿ ಅವರ ಶ್ರಮ ಸಾಕಷ್ಟಿದೆ ಎಂದು ಬಿಇಒ ಸೋಮಶೇಖರಗೌಡ ಪಾಟೀಲ ಹೇಳಿದರು.

ಪಟ್ಟಣದ ಶುಕ್ರವಾರ ಸುದ್ದಿಗೋಷ್ಠಿ ಮಾತನಾಡಿ, ಶಾಸಕರ ಪ್ರಯತ್ನದಿಂದ ಇಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 63 ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಬಡ ಮಕ್ಕಳು ಶೈಕ್ಷಣಿಕ ಭವಿಷ್ಯ ಕಂಡುಕೊಳ್ಳುವುದಕ್ಕೆ ಪೂರಕವಾಗಿದೆ ಎಂದರು.

ಹುಲೇಗುಡ್ಡ, ಹಿರೇವಂಕಲಕುಂಟಾ,ದ್ಯಾಂಪೂರ, ಸೋಂಪೂರದಲ್ಲಿ ಹೊಸದಾಗಿ ಆರಂಭಿಸಲಾದ ನಾಲ್ಕು ಪ್ರೌಢಶಾಲೆಗಳಲ್ಲಿ ಸೋಮವಾರದಿಂದ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಹೊಸದಾಗಿ ಮಂಜೂರಾದ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ಇಲಾಖೆಯ ನಿಯಮಾವಳಿ ಪ್ರಕಾರ ಮಾಡಿಕೊಳ್ಳಲಾಗುವುದು. ಅಲ್ಲಿಯವರೆಗೂ ಸಮೀಪದ ಶಾಲೆಯ ಮುಖ್ಯಶಿಕ್ಷರನ್ನು ಹೆಚ್ಚುವರಿಯಾಗಿ ಪ್ರಭಾರಗಳನ್ನಾಗಿ ನೇಮಕ ಮಾಡಲಾಗಿದೆ ಎಂದರು.

ಪ್ರೌಢಶಾಲೆಗಳ ಕಟ್ಟಡಕ್ಕೆ ಹಾಗೂ ಪೀಠೋಪಕರಣ ಖರೀದಿಗಾಗಿ ಕೆಕೆಆರ್‌ಡಿಬಿವತಿಯಿಂದ 2.50 ಕೋಟಿ ರೂ. ಅನುದಾನ ಲಭ್ಯವಿದ್ದು, ಸ್ಥಳೀಯ ದಾನಿಗಳು ಭೂದಾನ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕ ರಾಯರೆಡ್ಡಿ ಅವರ ಎರಡು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ 16 ಪ್ರೌಢ ಶಾಲೆಗಳು ಮಂಜೂರಾಗಿವೆ. ಅವರ ಶೈಕ್ಷಣಿಕ ದೂರದೃಷ್ಠಿಗೆ ಸಾಕ್ಷಿಯಾಗಿದೆ. ಪ್ರತ್ಯೇಕ 4 ಪ್ರೌಢಶಾಲೆಗಳು ಬಾಲಕಿಯರಿಗಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಪ್ರೌಢಶಾಲೆಗಳಿಗೆ ಆದ್ಯತೆ ಮೇರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.  ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ ಕೊರ್ಲಳ್ಳಿ, ಸಂಗಮೇಶ ಗುತ್ತಿ, ಶಾಲಾ ಸುಧಾರಣಾ ಸಮಿತಿ ಸದಸ್ಯೆ ಸವಿತಾ ಓಜನಹಳ್ಳಿ, ಪದವಿ ಪೂರ್ವ ಕಾಲೇಜು ಸಿಡಿಸಿ ಉಪಾಧ್ಯಕ್ಷ ಸಿದ್ದು ಬನ್ನಪ್ಪಗೌಡ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಓಬಳೆಪ್ಪ ಕುಲಕರ್ಣಿ, ಬಿಆರ್‌ಸಿ ಸಮನ್ವಯಾಧಿಕಾರಿ ಅಶೋಕ ಗೌಡರ, ದೈಹಿಕ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net