

ಸಂತೋಷ ಬಂಡ್ರಿ
ಯಲಬುರ್ಗಾ: ತಾಲೂಕಿನಾದ್ಯಂತ ಹಿಂಗಾರು ಮಳೆ ಅಭಾವದಿಂದ ಪ್ರಮುಖ ಬೆಳೆಯಾದ ಕಡಲೆ ಅತ್ಯಂತ ಕಡಿಮೆ ಇಳುವರಿ ಬಂದಿದ್ದು, ರೈತರಿಗೆ ಆರ್ಥಿಕ ಸಂಕಷ್ಟ ತಂದಿದೆ. ಖರ್ಚು ಮಾಡಿದ ಹಣ ಮರಳಿ ಬಾರದಂತ ಸ್ಥಿತಿ ನಿರ್ಮಾಣವಾಗಿದೆ.
ಮುಧೋಳ, ಕರಮುಡಿ, ಕುಡಗುಂಟಿ, ತೊಂಡಿಹಾಳ, ಬಂಡಿಹಾಳ, ಸಂಗನಾಳ, ಕಲ್ಲೂರು ಸೇರಿ ವಿವಿಧೆಡೆ ಹಿಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಕಡಲೆ ಬೆಳೆಯಲಾಗಿದೆ. ಆದರೆ ಸಕಾಲಕ್ಕೆ ಮಳೆ ಆಗದೇ ತೇವಾಂಶ ಕೊರತೆ ಹಾಗೂ ಚಳಿಯ ಅಭಾವದಿಂದ ಕಡಲೆ ಬೆಳೆ ಇಳುವರಿ ಕುಸಿದಿದೆ.
ಎಕರೆಗೆ 2 ಕ್ವಿಂಟಾಲ್: ಹೋಬಳಿಯ ಹಲವಡೆ ಹಿಂಗಾರು ಹಂಗಾಮಿನಲ್ಲಿ ಅಧಿಕ ಪ್ರಮಾಣದಲ್ಲಿ ಕಡಲೆ ಬೆಳೆಯಲಾಗಿದೆ. ಫಸಲಿನ ರಾಶಿ ಮಾಡುವ ಕಾರ್ಯ ಭರದಿಂದ ಸಾಗಿದ್ದರೂ ಇಳುವರಿ ಮಾತ್ರ ತೀವ್ರವಾಗಿ ಕುಸಿದಿದೆ. ಪ್ರತಿ ಬಾರಿ ಎಕರೆಗೆ 5ರಿಂದ 6 ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಈ ಬಾರಿ ಎರಡು ಕ್ವಿಂಟಾಲ್ ದಾಟದಿರುವುದು ರೈತರ ನಿದ್ದೆಗಡೆಸಿದೆ.
ಹೆಚ್ಚು ಖರ್ಚು: ಕಪ್ಪು ಮಣ್ಣು ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ಕಡಲೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಬೆಳೆಗೆ ಕೀಟಬಾಧೆ ಹೆಚ್ಚು. ಬಿತ್ತನೆ ಮಾಡಿ ಬೆಳೆಗೆ ಹೂ ಹಾಗೂ ಕಾಯಿ ಹಿಡಿಯವರೆಗೂ ಕೀಟಗಳಿಂದ ಸಂರಕ್ಷಿಸಲು ಕೀಟನಾಶಕ ಸಿಂಪಡಿಸಬೇಕು. ಎಕರೆಗೆ ಕನಿಷ್ಠ 6 ರಿಂದ 7 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ರಾಶಿ ಮಾಡಲು 8 ರಿಂದ 10 ಸಾವಿರ ರೂ. ಖರ್ಚಾಗುತ್ತದೆ. ಖರ್ಚು ಹೆಚ್ಚಾದರೂ ಎಕರೆಗೆ 2 ಕ್ವಿಂಟಾಲ್ ಇಳುವರಿ ಬಂದಿರುವುದು ನುಗ್ಗಲಾರದ ತುತ್ತಾಗಿ ಪರಿಣಮಿಸಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಕಡಿಮೆ ಮಳೆ ಆಗುತ್ತಿದ್ದು, ಈ ವರ್ಷ ಮುಂಗಾರು, ಹಿಂಗಾರು ಮಳೆ ಇಲ್ಲದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಿಂಗಾರು ಬೆಳೆಗೆ ಮಳೆಗಿಂತ ತೇವಾಂಶ ಮತ್ತು ಚಳಿ ಅಗತ್ಯ. ಈ ಬಾರಿ ಅದೂ ಕಡಿಮೆಯಾಗಿ ಕಡಲೆ ಬೆಳೆ ಇಳುವರಿ ಕುಸಿದಿದೆ.
ವಾತಾವರಣದಲ್ಲಿ ತೇವಾಂಶದ ಕೊರತೆಯಾಗಿದೆ. ಕಡಲೆ ಬೆಳೆ ಕಾಯಿ ಕಟ್ಟುವ ಹಂತದಲ್ಲಿ ಮೋಡಕವಿದ ವಾತಾವರಣ ಸೃಷ್ಠಿಯಾಗಿ ರೈತರು ಕೀಟಬಾಧೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಒಂದೇ ಬೆಳೆಯನ್ನು ನೆಚ್ಚಿಕೊಂಡಿರುವು ದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿವರ್ಷ ಬೆಳೆ ಬದಲಿಸಿದರೆ ಮಣ್ಣಿನ ಫಲವತ್ತೆತೆ ಹೆಚ್ಚುತ್ತದೆ. ಇದರಿಂದ ಉತ್ತಮ ಇಳುವರಿ ಬರಲಿದೆ. ಪ್ರಮೋದ ತುಂಬಳ ಕೃಷಿ ಇಲಾಖೆ ಅಧಿಕಾರಿ ಯಲಬುರ್ಗಾ ಮೂರು ಎಕರೆ ಬಿತ್ತನೆ ಬೀಜಕ್ಕೆ 15 ಸಾವಿರ ರೂ., 3800 ರೂ. ಗೊಬ್ಬರ, 8 ಸಾವಿರ ರೂ. ಕ್ರಿಮಿನಾಶಕ ಹಾಗೂ 6000 ರೂ. ಕೃಷಿ ಕಾರ್ಮಿಕರ ಕೂಲಿ ಸೇರಿ ಒಟ್ಟು 32,800 ರೂ. ಖರ್ಚು ಮಾಡಲಾಗಿದೆ. ಕೇವಲ 5 ಕ್ವಿಂಟಾಲ್ ಇಳುವರಿ ಬಂದಿದೆ. ಮಾರುಕಟ್ಟೆ ಯಲ್ಲಿ ಕ್ವಿಂಟಾಲ್‌ಗೆ 5500 ರೂ. ದರವಿದೆ. ಇದರಿಂದ 10 ರಿಂದ 12 ಸಾವಿರ ರೂ. ನಷ್ಟವಾಗಿದೆ. ಮಂಜುನಾಥ ಕಳಸಪ್ಪನವರ ಬಂಡಿಹಾಳ ಗ್ರಾಮದ ರೈತ