

ಯಲಬುರ್ಗಾ: ತಾಲೂಕಿನ ಕೋಳಿಹಾಳ ಸೀಮಾದ ಸರ್ವೇ ನಂ.109 ರಲ್ಲಿ ಅಳವಡಿಸಿದ್ದ 220 ಕೆ.ವಿ. ವಿದ್ಯುತ್ ಕಂಬಕ್ಕೆ ತಂತಿ ಎಳೆಯುವ ಕಾರ್ಯ ಮಾಡುತ್ತಿರುವಾಗ ಐದಾರು ಜನರ ಜತೆ ಸೇರಿ ಅಡ್ಡಿಪಡಿಸಿದ್ದಾರೆ ಎಂದು ಶರಣಪ್ಪ ಗುಂಗಾಡಿ ವಿರುದ್ಧ ಬೇವೂರು ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಐದಾರು ಜನರೊಂದಿಗೆ ಕಾರಿನಲ್ಲಿ ಏಕಾಏಕಿಯಾಗಿ ಬಂದು, ನಮಗೆ ಪ್ರತಿ ಕಂಬಕ್ಕೆ 50 ಲಕ್ಷ ರೂ. ಕೊಟ್ಟು ಕಾಮಗಾರಿ ಮಾಡಬೇಕು. ಇಲ್ಲದಿದ್ದರೆ ಕೆಲಸ ಮಾಡಲು ಬೀಡುವುದಿಲ್ಲವೆಂದು ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ ಎಂದು ಸೆರೆಂಟಿಕಾ ಕಂಪನಿಯ ರೈಟ್ ಆಫ್ ವೇ ಆಫೀಸರ್ ಬುಡ್ಡಪ್ಪ ಹಿರೇಮನಿ ದೂರು ನೀಡಿದ್ದಾರೆ.
ವಿದ್ಯುತ್ ಲೈನ್ ಕಾಮಗಾರಿ ಸ್ಥಳದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಮತ್ತು ಪದೇಪದೆ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದರಿಂದ ಮೂರು ಅಪರಾಧ ಮತ್ತು ಒಂದು ಮುಂಜಾಗ್ರತಾ ಪ್ರಕರಣ ದಾಖಲಾಗಿದೆ.
ಫೇಸ್‌ಬುಕ್ ಖಾತೆಯಲ್ಲಿ ದ್ವೇಷ ಹರಡುವಂತೆ ಸುಳ್ಳು ಆಪಾದನೆ ಮಾಡಿ ಪೋಸ್ಟ್ ಮಾಡಿದ್ದರಿಂದ ಸ್ವಯಂ ನಿವೃತ್ತಿ ಕೃಷಿ ಅಧಿಕಾರಿ ಶರಣಪ್ಪ ಗುಂಗಾಡಿ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾಗಿತ್ತು.
ರೈತರ-ಪೊಲೀಸರ ಮಾತಿನ ಚಕಮಕಿ
ಕೋಳಿಹಾಳ ಸೀಮಾದಲ್ಲಿ ಅನಧಿಕೃತವಾಗಿ ಅಳವಡಿಕೆ ಮಾಡಲಾಗುತ್ತಿದೆ ಎನ್ನಲಾಗುತ್ತಿರುವ ಹೈಟೆನ್ಷನ್ ವಿದ್ಯುತ್ ಕಂಬ ಅಳವಡಿಕೆಗೆ ಸಂಬಂಧಿಸಿದಂತೆ ಹೋರಾಟಗಾರರು ಹಾಗೂ ಪೊಲೀಸರು ನಡುವೆ ಶನಿವಾರ ತೀವ್ರ ಮಾತಿನ ಚಕಮಕಿ ನಡೆದಿದೆ.
ಶರಣಪ್ಪ ಗುಂಗಾಡಿಯನ್ನು ಬಂಧಿಸಲಾಗಿದ್ದು, ರೈತರಿಂದ ಆಕ್ರೋಶ ವ್ಯಕ್ತವಾಯಿತು. ಯಲಬುರ್ಗಾ ತಾಲೂಕು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಖಾಸಗಿ ಕಂಪನಿಯಿಂದ ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದರೂ, ಆಡಳಿತ ಯಂತ್ರ ಖಾಸಗಿ ಕಂಪನಿಗಳ ಪರ ಲಾಭಿ ಮಾಡುತ್ತಿದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ರೈತರು ಹಿಡಿಶಾಪ ಹಾಕಿದರು.