

ಯಲಬುರ್ಗಾ: ತಾಲೂಕಿನ ಕಲಭಾವಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜಾತ್ರೆಗೆ ಆಗಮಿಸುವ ಭಕ್ತರ ಪ್ರಸಾದಕ್ಕಾಗಿ ಶೇಂಗಾ ಹೋಳಿಗೆ, ಬದಾಮ ಪೂರಿ ಹಾಗೂ ನಾನಾ ಖಾದ್ಯ ಪದಾರ್ಥಗಳನ್ನು ಸಿದ್ಧಪಡಿಸಲಾಗಿದೆ. ಜ.21ರಂದು ನಡೆಯಲಿರುವ ಮಾರುತೇಶ್ವರ ಜಾತ್ರೆಯಲ್ಲಿ ಭಕ್ತರಿಗಾಗಿ ಭರ್ಜರಿ ಭೋಜನ ತಯಾರಿ ನಡೆದಿದೆ.
ಎರಡೂವರೆ ಕ್ವಿಂಟಾಲ್ ಶೇಂಗಾ ಹೋಳಿಗೆ, ಒಂದು ಕ್ವಿಂಟಾಲ್ ಬದಾಮ ಪೂರಿ ಈಗಾಗಲೇ ಸಿದ್ಧಪಡಿಸಲಾಗಿದೆ. ಗ್ರಾಮದ ಮಹಿಳೆಯರು ದಾಸೋಹಕ್ಕೆ ರೊಟ್ಟಿ ತಯಾರಿಸಿ ಕೊಡುತ್ತಿದ್ದಾರೆ. ಬದಾಮ ಪೂರಿ ತಯಾರಿಗೆ ಯುವಕರು ಕೈಜೋಡಿಸಿದ್ದಾರೆ.
ಜಾತ್ರೆ ದಿನದಂದು ಭಕ್ತರಿಗಾಗಿ 4 ಕ್ವಿಂಟಾಲ್ ಗೋಧಿ ಹುಗ್ಗಿ ಮಾಡಲಾಗುತ್ತದೆ ಎಂದು ದೇವಸ್ಥಾನ ಕಮಿಟಿ ಸದಸ್ಯರು ತಿಳಿಸಿದ್ದಾರೆ.