ಅಗತ್ಯ ಸೌಕರ್ಯಗಳಿಗೆ ಆದ್ಯತೆ ನೀಡಿ

ylb-1
ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಸೋಮವಾರ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ, ಶಿಕ್ಷಣ ಕಾರ್ಯಪಡೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಮಾತನಾಡಿದರು. ಮಕ್ಕಳ ಸಂರಕ್ಷಣಾ ಅಧಿಕಾರಿ ಮಹಾಂತೇಶ ಪೂಜಾರ, ಸಿಆರ್‌ಪಿ ಹುಸೇನ್ ಭಗವಾನ ಇತರರಿದ್ದರು.
Published on

ಯಲಬುರ್ಗಾ: ಬಿಸಿಯೂಟಕ್ಕೆ ಬಳಸುವ ತೊಗರಿ ಬೇಳೆ ಕಳಪೆಯಾರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಹುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ತಾಲೂಕಿನ ಹಿರೇಅರಳಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ, ಶಿಕ್ಷಣ ಕಾರ್ಯಪಡೆ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಪ್ರತಿ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ-1098 ಕಡ್ಡಾಯವಾಗಿ ಬರೆಸಬೇಕು. ಶಾಲೆಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಅಳವಡಿಸುವುದಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು. ಮಕ್ಕಳ ಗ್ರಾಮ ಸಭೆಯಲ್ಲಿ ವ್ಯಕ್ತವಾದ ಸಮಸ್ಯೆಗಳ ಪರಿಹಾರಕ್ಕೆ ಗ್ರಾಪಂ ಕ್ರಮ ವಹಿಸಬೇಕು.

ಶಾಲೆಗಳಲ್ಲಿ ಶೌಚಗೃಹ, ಅಡುಗೆ ಕೊಠಡಿ, ಕುಡಿವ ನೀರು ಇತರ ಅಗತ್ಯ ಸೌಕರ್ಯಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು. ಈ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಸೂಚಿಸಿದರು.

ಶಿಕ್ಷಕರು ವಿದ್ಯಾರ್ಥಿಗಳನ್ನು ಕ್ರೀಡಾಕೂಟಕ್ಕೆ ಕರೆದೋಯ್ಯುವಾಗ ಪ್ಯಾಸೇಂಜರ್ ವಾಹನಗಳನ್ನು ಮಾತ್ರ ಬಳಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲ್ಯ ವಿವಾಹವಾಗುವ ಸಾಧ್ಯತೆ ಇರುತ್ತದೆ. ಅಂಥವರನ್ನು ಶಿಕ್ಷಕರು ಶಾಲೆಗೆ ಕರೆತರಬೇಕು. ನಿರಂತರ ಗೈರಾಗುವವರ ಹಾಜರಾತಿ ಹಾಕಬಾರದು.

ಗ್ರಾಪಂಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ಹಾಗೂ ಕಾರ್ಯಪಡೆ ಸಮಿತಿ ರಚಿಸದಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಎಚ್ಚರಿಸಿದರು.

ಸಿಆರ್‌ಪಿ ಹುಸೇನ್ ಭಗವಾನ ಮಾತನಾಡಿ, ಹಿರೇಅರಳಿಹಳ್ಳಿ ಸಿಆರ್‌ಸಿ ವ್ಯಾಪ್ತಿಯ ಶಾಲಾ ಕೊಠಡಿಗಳು ಶಿಥಿಗೊಂಡಿದ್ದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ತೆರವುಗೊಳಿಸುವುದಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ಮಕ್ಕಳ ಸಂರಕ್ಷಣಾ ಅಧಿಕಾರಿ ಮಹಾಂತೇಶ ಪೂಜಾರ, ಪಿಡಿಒ ಸೋಮಪ್ಪ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net