

ಯಲಬುರ್ಗಾ: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಬೆಳೆಗಳಿಗೆ ಸಕಾಲಕ್ಕೆ ಪೂರೈಸಲು ಮತ್ತು ಬಿತ್ತನೆಗೆ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಇದನ್ನು ಪಡೆಯಲು ಪರದಾಡುವಂತಾಗಿದೆ.
ಕಡಿಮೆ ದರ ಎನ್ನುವ ಕಾರಣಕ್ಕೆ ಯೂರಿಯಾ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಬಂದಿದ್ದು, ರಸಗೊಬ್ಬರದ ಮಳಿಗೆಗಳತ್ತ ಹೆಚ್ಚಿನ ರೈತರು ಧಾವಿಸುತ್ತಿದ್ದಾರೆ. ತಾಲೂಕಿನಲ್ಲಿ ಸಜ್ಜೆ, ಮೆಕ್ಕೆಜೋಳ ಹೇರಳವಾಗಿ ಬಿತ್ತನೆ ಮಾಡಲಾಗಿದೆ. ಅಗತ್ಯ ಪ್ರಮಾಣದಲ್ಲಿ ಯೂರಿಯಾ ನೀಡಿದರೆ ಈ ಬೆಳೆಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂಬ ಉದ್ದೇಶದಿಂದ ಬೆಳೆಗಾರರು ಯೂರಿಯಾ ಖರೀದಿಸಲು ಅಂಗಡಿಗಳ ಮುಂದೆ ಮುಗಿಬಿದ್ದಿದ್ದಾರೆ.
ಡಿಎಪಿಗೆ ಡಿಮ್ಯಾಂಡ್: ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗದೇ ಇರುವುದರಿಂದ ಪರ್ಯಾಯವಾಗಿ ಕಾಂಪ್ಲೆಕ್ಸ್ ಗೊಬ್ಬರಕ್ಕೆ ರೈತರು ಮೊರೆ ಹೋಗಿದ್ದಾರೆ. ಬೆಳೆಗಳಿಗೆ ಕಾಂಪ್ಲೆಕ್ಸ್ ಹಾಕಿದ ನಂತರ ಯೂರಿಯಾ ಹಾಕಬೇಕಿದ್ದು, ಇದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.
ನ್ಯಾನೋಗೆ ಆದ್ಯತೆ ನೀಡಲಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮತ್ತು ಹೆಚ್ಚು ರಸಗೊಬ್ಬರ ಅಂಗಡಿಗಳಿದ್ದು, ಕೆಲವು ಅಂಗಡಿಗಳಲ್ಲಿ ಮಾತ್ರ ಯೂರಿಯಾ ಗೊಬ್ಬರ ಸಿಗುತ್ತಿದೆ. ಅಪಾಯಕಾರಿ ರಾಸಾಯನಿಕ ಗೊಬ್ಬರಗಳಾದ ಯೂರಿಯಾ ಮತ್ತು ಫಾಸ್ಪೇಟ್ ಬೇಸಾಯ ಭೂಮಿಗಳಷ್ಟೆ ಅಲ್ಲದೇ, ಅನೇಕ ಜೀವರಾಶಿಗಳಿಗೆ ಹಾನಿಯುಂಟು ಮಾಡುತ್ತವೆ. ಬೆಳೆಯುವ ಹಾಗೂ ನಾಟಿ ಹಂತದಲ್ಲಿ ಮಾತ್ರ ಯೂರಿಯಾ ಅಗತ್ಯವಿದೆ. ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಅಪಾಯ ಇದೆ. ಹೀಗಾಗಿ ರೈತರು ನ್ಯಾನೋ ಗೊಬ್ಬರಕ್ಕೆ ಆದ್ಯತೆ ನೀಡಬೇಕು ಎನ್ನುತ್ತಾರೆ ಕೃಷಿ ತಜ್ಞರು.
ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಹೋಬಳಿ ಭಾಗಕ್ಕೆ ಅಗತ್ಯಕ್ಕೆ ತಕ್ಕಂತೆ ಯೂರಿಯಾ ಗೊಬ್ಬರ ಪೂರೈಸಲಾಗುವುದು. ರೈತರು ಗೊಂದಲಕ್ಕೆ ಒಳಗಾಗಬಾರದು. ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಹೆಚ್ಚಿನ ದರಕ್ಕೆ ಯೂರಿಯಾ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
ಪ್ರಮೋದ ತುಂಬಳ
ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ