

ಯಲಬುರ್ಗಾ: ಪಟ್ಟಣದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಲು ಶಿಫಾರಸು ಮಾಡಲು ಒತ್ತಾಯಿಸಿ ವಕೀಲರ ತಾಲೂಕು ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್.ಎಸ್.ಹೊಂಬಳ ಮಾತನಾಡಿ, ಹೈಕೋರ್ಟ್ ಆದೇಶ ಹಾಗೂ ನಿಯಮಾವಳಿ ಪ್ರಕಾರ ಕೊಪ್ಪಳ ಜಿಲ್ಲೆಗೆ ಎರಡು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಸ್ಥಾಪಿಸಲು ಮಂಜೂರಾಗಿವೆ.
ಒಂದನ್ನು ಕೊಪ್ಪಳ ನಗರದಲ್ಲಿ ಸ್ಥಾಪಿಸಲು ಹಾಗೂ ಮತ್ತೊಂದು ವಿಚಾರಣೆ ಹಂತದಲ್ಲಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪ್ರತಿ ತಾಲೂಕುಗಳಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಸ್ಥಾಪಿಸಬೇಕೆಂಬ (ಡೋರ್ ಟು ಡೋರ್ ಜಸ್ಟಿಸ್) ಕಾರಣ ಯಲಬುರ್ಗಾ ಹಾಗೂ ಕುಕನೂರ ಅವಳಿ ತಾಲೂಕುಗಳನ್ನು ಪರಿಗಣಿಸಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಬೇಕು.
ಈಗಾಗಲೇ ಎಲ್ಲ ಮೂಲಸೌಕರ್ಯ ಹಾಗೂ ಸುಸಜ್ಜಿತ ನೂತನ ಕಟ್ಟಡ ಸಂಕೀರ್ಣವಿದೆ. ಇದರಿಂದ ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಿಗೆ ಅನುಕೂಲವಾಗುತ್ತದೆ. ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಹೆಚ್ಚುವರಿ ನ್ಯಾಯಾಲಯ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಕೀಲರಾದ ಯು.ಎಸ್.ಮೆಣಸಗೇರಿ, ಬಿ.ಎಂ.ಶಿರೂರು, ರಾಮಣ್ಣ ಸಾಲಭಾವಿ, ಆನಂದ ಉಳ್ಳಾಗಡ್ಡಿ, ಸರ್ಕಾರಿ ಅಪರ ವಕೀಲ ಮಲ್ಲನಗೌಡ ಪಾಟೀಲ, ರಾಜಶೇಖರ ನಿಂಗೋಜಿ, ಸಿ.ಎಸ್.ಬನ್ನಪ್ಪಗೌಡ್ರ, ಮಹಾಂತೇಶ .ಟಿ, ಹುಚ್ಚೀರಪ್ಪ , ಹಸನಸಾಬ ನದಾಫ್,ನಾಗರಾಜ ಹವಾಲ್ದಾರ್, ರಫಿ, ಬಸವರಾಜ ತುರಕಾಣಿ, ಬಸವರಾಜ ಬಂಡಿ, ಎ.ಎಂ. ಪಾಟೀಲ್, ಮಂಜು ಕಮ್ಮಾರ್, ಜಗದೀಶ ಹೂಗಾರ ಇತರರಿದ್ದರು.