ರೈತರಿಗೆ ಎತ್ತುಗಳೇ ಬೆನ್ನೆಲುಬು, ಯಂತ್ರಗಳಿದ್ದರೂ ತಗ್ಗದ ಬೇಸಾಯ ಪದ್ಧತಿ

agricultural activities
ಬಂಡಿಹಾಳ ಗ್ರಾಮದ ರೈತರು ಹೆಸರು ಬಿತ್ತನೆಗೊಂಡ ಹೋಲದಲ್ಲಿ ಎತ್ತುಗಳ ಮೂಲಕ ಎಡೆ ಹೊಡೆಯುತ್ತಿರುವುದು.
Published on

ಯಲಬುರ್ಗಾ: ಯಾಂತ್ರೀಕರಣ ಯುಗದಲ್ಲಿ ಎತ್ತುಗಳ ಬಳಕೆ ಕಡಿಮೆಯಾದರೂ ಅವುಗಳ ಬೇಡಿಕೆ ತಗ್ಗಿಲ್ಲ. ಕಾರಣ ಅನೇಕ ಕೃಷಿ ಚಟುವಟಿಕೆಗೆ ಎತ್ತುಗಳೇ ಆಧಾರವಾಗಿವೆ.

ದೇಶದ ಬೆನ್ನೆಲುಬು ರೈತನಾದರೆ, ರೈತನಿಗೆ ಎತ್ತುಗಳೇ ಬೆನ್ನೆಲುವಾಗಿವೆ. ಲಕ್ಷಾಂತರ ರೂ. ವ್ಯಯಿಸಿ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗದ ಸಣ್ಣ ಹಿಡುವಳಿದಾರರಿಗೆ ಎತ್ತುಗಳೇ ಆಧಾರವಾಗಿದೆ. ಅಂದ ಹಾಗೆ ಮೊದಲ ಉಳುಮೆ ಎತ್ತುಗಳಿಂದಲೇ ಆಗಬೇಕು ಎಂಬುದು ಇಲ್ಲಿನ ರೈತರ ಸಂಪ್ರದಾಯ. ಹೀಗಾಗಿ ಇವುಗಳಿಗೆ ಬೇಡಿಕೆ ಇತರೆಡೆಗಿಂತ ಇಲ್ಲಿ ಹೆಚ್ಚಿದೆ.

ಪ್ರಸ್ತುತ ಸಣ್ಣ ಮತ್ತು ಮಧ್ಯಮ ವರ್ಗದ ರೈತರೂ ಸಹ ಎತ್ತುಗಳನ್ನು ಮಾರಿ ಯಂತ್ರಗಳನ್ನು ಖರೀದಿಸಿದ್ದರಿಂದ ಎತ್ತುಗಳ ಬೇಡಿಕೆ ಮತ್ತಷ್ಟು ಬಿಗಡಾಯಿಸಿದೆ. ಜಮೀನಿನ ಎಲ್ಲ ಕೆಲಸವೂ ಯಂತ್ರದಿಂದ ಸಾಧ್ಯವಿಲ್ಲ. ಯಂತ್ರಕ್ಕೂ ಎತ್ತುಗಳ ಬೇಸಾಯಕ್ಕೆ ಬಹಳ ವ್ಯತ್ಯಾಸವಿದೆ. ಇತ್ತೀಚೆಗೆ ಕೃಷಿಯ ಎಲ್ಲ ಕೆಲಸಕ್ಕೂ ಯಂತ್ರ ಲಭ್ಯ ಇವೆ. ಆದರೆ ಕೊಂಡುಕೊಳ್ಳುವ ಸಾಮರ್ಥ್ಯ ಬಹುತೇಕ ರೈತರಿಗಿಲ್ಲ. ಹೀಗಾಗಿ ಎತ್ತುಗಳು ಅವಶ್ಯವಾಗಿವೆ.

ಬೆಳೆ ಮಧ್ಯೆ ಎಡೆ ಹೊಡೆಯಲು, ಬೆಳೆ ಮಧ್ಯಮ ಗಾತ್ರಕ್ಕೆ ಬಂದಾಗ ಓಡು ನಿರ್ಮಿಸಲು ಇತ್ಯಾದಿ ಕೆಲಸಕ್ಕೆ ಎತ್ತುಗಳೇ ಅತ್ಯುಪಯುಕ್ತವಾಗಿವೆ. ಹೀಗಾಗಿ ದೊಡ್ಡ ದೊಡ್ಡ ಜಮೀನುಳ್ಳವರು ದಿನಕ್ಕೆ ಎರಡು ಸಾವಿರ ರೂ. ಕೊಟ್ಟರೂ ಬಾಡಿಗೆಗೆ ಎತ್ತುಗಳು ಸಿಗದ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net