

ಯಲಬುರ್ಗಾ: ಮಕ್ಕಳ ಹಕ್ಕುಗಳ ಕಾಯ್ದೆ ಅನುಷ್ಠಾನಗೊಳಿಸಿ ಹಿತ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗ್ರಾಪಂನಿಂದ ಸೋಮವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವ ಜತೆಗೆ ಗುಣಾತ್ಮ ಶಿಕ್ಷಣ ಕೊಡಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತರುವ ಕೆಲಸ ಆಗಬೇಕು. ಪಾಲಕರು ಹೊಲ, ತೋಟದ ಕೆಲಸಕ್ಕೆ ಮಕ್ಕಳನ್ನು ಬಳಕೆ ಮಾಡುವುದು ಅಪರಾಧ. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ಪದ್ಧತಿಯಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಮಾಜದಲ್ಲಿ ಎಲ್ಲರೂ ಕೈಜೋಡಿಸಬೇಕು. ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಕಾನೂನು ವಿರುದ್ಧವಾಗಿದ್ದು, ಸರ್ಕಾರ ಗ್ರಾಪಂ ಮಟ್ಟದಲ್ಲಿ ಕಾವಲು ಸಮಿತಿ ರಚಿಸಿ ಮಕ್ಕಳ ರಕ್ಷಣೆ ಹೊಣೆ ಒದಗಿಸಿದೆ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.
ತಾಪಂ ಇಒ ಸಂತೋಷ ಪಾಟೀಲ್ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಮಕ್ಕಳ ಹಕ್ಕುಗಳ ಸಭೆ ನಡೆಸಲಾಗುತ್ತಿದ್ದು, ಕಾವಲು ಸಮಿತಿ ಉತ್ತಮ ಕೆಲಸ ಮಾಡುತ್ತಿದೆ. ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಸಮಾಜ ಸುಧಾರಣೆಗೆ ಶಿಕ್ಷಣ ಬುನಾದಿಯಾಗಿದ್ದು, ಮಕ್ಕಳಿಗೆ ಅಕ್ಷರಾಭ್ಯಾಸ ಕಲಿಸುವ ಕೆಲಸ ನಾವೆಲ್ಲರೂ ಮಾಡಬೇಕೆಂದರು.
ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹನುಮಂತಪ್ಪ ವಾದಿ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಶಿವಶಂಕರಗೌಡ ಬನ್ನಿಗೋಳ, ಬಸವರಾಜ ಭಾವಿಕಟ್ಟಿ, ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ, ಮುಖ್ಯಶಿಕ್ಷಕ ಕಲ್ಲಯ್ಯ ಕೊಚಲಾಪುರ, ಭೂದಾನಿ ಅಮರೇಶಪ್ಪ ವಾದಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಸಾರಿಗೆ ಘಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಹಾಲೂರು, ಅಂಗನವಾಡಿ ಮೇಲ್ವಿಚಾರಕಿ ಗಂಗಮ್ಮ, ಅಕ್ಷರ ದಾಸೋಹ ಅಧಿಕಾರಿ ಟಿ.ಜೆ.ದಾನಿ, ಕಾರ್ಮಿಕ ನಿರೀಕ್ಷಕಿ ನಿವೇದಿತಾ, ಎಎಸ್‌ಐ ಇಮಾಮ್‌ಸಾಬ್, ಪಿಡಿಒ ಸೋಮಪ್ಪ ಪೂಜಾರ ಹಾಗೂ ಗ್ರಾಪಂ ಸದಸ್ಯರು, ಸಿಬ್ಬಂದಿ, ಎಸ್ಡಿಎಂಸಿ ಪದಾಧಿಕಾರಿಗಳು ಇದ್ದರು.