

ಯಲಬುರ್ಗಾ: ಜನರು ನಳದಿಂದ ನೀರು ಪಡೆದ ಬಳಿಕ ಕ್ಯಾಪ್ ಹಾಕುತ್ತಿಲ್ಲ. ಹೀಗಾಗಿ ಜಲ ವ್ಯರ್ಥವಾಗಿ ಚರಂಡಿಗೆ ಹರಿಯುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು. ಗ್ರಾಪಂ ಕೇಂದ್ರ ಸ್ಥಾನ ಹಾಗೂ ಎಲ್ಲ ಹಳ್ಳಿಗಳಲ್ಲಿ ನಳದ ಮಾಲೀಕರು ನೀರು ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ಸದಸ್ಯರು ಹಾಗೂ ಸಾರ್ವಜನಿಕರು ದೂರುತ್ತಿದ್ದಾರೆ. ಮೊದಲು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಅದಕ್ಕೂ ಎಚ್ಚೆತ್ತುಕೊಳ್ಳದಿಂದರೆ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು.
ಇದನ್ನೂ ಓದಿ: ಭಟ್ಕಳದಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು
ಪಿಡಿಒ ವೆಂಕಟೇಶ ನಾಯಕ್ ಮಾತನಾಡಿ, ಚಿಕ್ಕಮ್ಯಾಗೇರಿ 1.8 ಲಕ್ಷ, ಕುದ್ರಿಕೊಟಗಿ 21 ಸಾವಿರ, ಕುಡಗುಂಟಿ 14 ಸಾವಿರ, ಮಲಕಸಮುದ್ರ 46 ಸಾವಿರ ಸೇರಿ ಒಟ್ಟು 1.91 ಲಕ್ಷ ರೂ.ಕರ ವಸೂಲಿಯಾಗಿದೆ. ಕರ ವಸೂಲಿಗೆ ತಕ್ಕಂತೆ ಐಎಸ್‌ಒ ಪ್ರಮಾಣ ಪತ್ರ ಪಡೆಯುವ ಸಲುವಾಗಿ ಪಂಚಾಯಿತಿಗೆ ಬಣ್ಣ ಹಚ್ಚುವುದು ಸೇರಿದಂತೆ ಇತರ ಬದಲಾವಣೆ ಮಾಡುವ ಸಲುವಾಗಿ ಹಂತ ಹಂತವಾಗಿ ಖರ್ಚು ಮಾಡಲಾಗಿದೆ. ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶರಣವ್ವ ಯಲ್ಲಪ್ಪ ಕಡೆಮನಿ ಅವರನ್ನು ಅಡುಗೆ ಸಹಾಯಕ ಹುದ್ದೆಗೆ ಸರ್ವಾನುಮತದಿಂದ ಆಯ್ಕೆ ಮಾಡಿ ಅನುಮೋದನೆಗೆ ಕಳುಹಿಸಲಾಗುವುದು. 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ನಿರ್ಬಂಧಿತ ಹಾಗೂ ಅನಿರ್ಬಂಧಿತ ಅನುದಾನದಲ್ಲಿ 7.50 ಲಕ್ಷ ರೂ.ಖರ್ಚು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಗಾಳೆವ್ವ ಮಾದರ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ವಡ್ಡರ, ಸದಸ್ಯರಾದ ಯಮನೂರಪ್ಪ ಕುರಿ, ದೇವಪ್ಪ ಲಗಳೂರ, ಮಂಜುಳಾ ಚನ್ನಪ್ಪನಹಳ್ಳಿ, ಗಂಗಮ್ಮ ಕುಕನಪಳ್ಳಿ, ಫಾತಿಮಾ ಬೇಗಂ, ಕಾವೇರಿ ಮಾರನಾಳ, ಶರಣಯ್ಯ ಬಂಡಿಹಾಳ, ಶಾಂತಮ್ಮ ಮುರಾರಿ, ಶರಣಪ್ಪ ಕರಡದ, ರೇಣವ್ವ ಬಾದ್ರಿ, ಶರಣಪ್ಪ ಹಾದಿಮನಿ, ಕೃಷ್ಣ ರಾಠೋಡ, ಬಸವರಾಜ ಬಿಸೆರೊಟ್ಟಿ, ಹುಚ್ಚಮ್ಮ ಉಪ್ಪಾರ, ಶರಣಯ್ಯ ಬಂಡಿಹಾಳ ಇತರರಿದ್ದರು.