

ಯಲಬುರ್ಗಾ: ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಸದಸ್ಯರು ಸಹಕಾರ ನೀಡಿದಾಗ ವಿವಿಧ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ ಅಮರಗಟ್ಟಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಗ್ರಾಮದಲ್ಲಿ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಸದಸ್ಯರು ವಾರ್ಡ್‌ಗಳ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಸಾರ್ವಜನಿಕರು ನೀರನ್ನು ಕಾಯಿಸಿ ಕುಡಿಯಬೇಕು. ಆರೋಗ್ಯಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಪಿಡಿಒ ವೆಂಕಟೇಶ ನಾಯಕ ಮಾತನಾಡಿ, ಪ್ರಸ್ತಕ ಸಾಲಿನ 15ನೇ ಹಣಕಾಸು ಯೋಜನೆಗೆ 43 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಸದಸ್ಯರು ನಿಗದಿಪಡಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. 2025-26ನೇ ಸಾಲಿನ 15ನೇ ಹಣಕಾಸು ಯೋಜನೆ ಸಿದ್ಧಪಡಿಸಲು ಪಟ್ಟಿ ನೀಡಬೇಕು. ಇದು 2.0 ತಂತ್ರಾಂಶದಲ್ಲಿ ಅಳವಡಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಗಾಳೆವ್ವ ಮಾದರ, ಸದಸ್ಯರಾದ ಯಮನೂರಪ್ಪ ಕುರಿ, ದೇವಪ್ಪ ಲಗಳೂರ, ಬಸವರಾಜ ಬಿಸೆರೊಟ್ಟಿ, ಗಂಗಮ್ಮ ಕುಕನಪಳ್ಳಿ, ಫಾತೀಮಾ ಬೇಗಂ, ಕಾವೇರಿ ಮಾರನಾಳ, ಶರಣಯ್ಯ ಬಂಡಿಹಾಳ, ಶಾಂತಮ್ಮ ಮುರಾರಿ, ಶರಣಪ್ಪ ಕರಡದ, ಉಮೇಶ ವಡ್ಡರ, ರೇಣವ್ವ ಬಾದ್ರಿ, ಶರಣಪ್ಪ ಹಾದಿಮನಿ, ಕೃಷ್ಣ ರಾಠೋಡ, ಕೆಂಚವ್ವ ಹಿರೇಮನಿ ಇತರರಿದ್ದರು.