

ಯಲಬುರ್ಗಾ; ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಕಾಯಕ ನಿಷ್ಟೆ, ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗಾಂಜಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮ ಅವರು ಹಲವು ಸಮಸ್ಯೆಗಳನ್ನು ಎದುರಿಸಿ ಮನುಕುಲದ ಶ್ರೇಯಸ್ಸಿಗಾಗಿ ಶ್ರಮಿಸಿದ್ದಾರೆ. ಮಹಿಳೆಯರ ಸಮಾನತೆಗೆ ಅವರ ಕೊಡುಗೆ ಅಪಾರ. ದೇವರು ಹಾಗೂ ಗುರುಲಿಂಗ ಜಂಗಮರಲ್ಲಿ ಅನನ್ಯಭಕ್ತಿ ಹೊಂದಿ, ಸುಖ-ದುಃಖ, ಅಂಬಲಿ-ಅಮೃತ, ಸ್ತುತಿ-ನಿಂದನೆಯನ್ನು ಸಮಾನವಾಗಿ ಸ್ವೀಕರಿಸಿದ ಶಿವಶರಣೆಯ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಂಪಯ್ಯಸ್ವಾಮಿ ಹಿರೇಮಠ ಮಾತನಾಡಿ, ಶ್ರೀಶೈಲ ಮಲ್ಲಿಕಾರ್ಜುನನ ಮೇಲೆ ಅಪಾರ ನಂಬಿಕೆ ಹೊಂದಿ, ಭಾವನಾತ್ಮಕ ಜೀವಿಯಾಗಿ, ಶಿವಲಿಂಗ ದೀಕ್ಷೆ ತೊಟ್ಟ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ. ಸಮಾಜ, ನಾಡು-ನುಡಿ ಹಾಗೂ ಮನುಕುಲದ ಉದ್ಧಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಸ್ತ್ರೀ ಕುಲದ ಗೌರವ ಹೆಚ್ಚಿಸಿದ, ಅರ್ಥಪೂರ್ಣ ಬದುಕು ಸಾಗಿಸಿದ ಮಲ್ಲಮ್ಮನ ವಿಚಾರಧಾರೆ ಮನೆ-ಮನಕ್ಕೆ ತಲುಪುವಂತಾಗಬೇಕು ಎಂದರು.
ಪಪಂ ಸದಸ್ಯ ಹನುಮಂತ ಭಜಂತ್ರಿ, ಮುಖಂಡರಾದ ನಿಂಗಪ್ಪ ಕಮತರ, ಸಿದ್ದು ಪೊಲೀಸ್ ಪಾಟೀಲ್, ನಾಗರಾಜ ತಲ್ಲೂರು, ಬಸವರಾಜ ನಾಯಕ, ಮಲ್ಲೇಶ ಮಲಪತಿ, ಪುನೀತ್ ಕೊಪ್ಪಳ, ಜೀವನಸಾಬ ಸುಂಕದ್, ಖಾಜಾವಲಿ ಗಡಾದ, ರಾಮಣ್ಣ ಛಲವಾದಿ, ಶರಣಪ್ಪ ಮಾನಶೆಟ್ಟರ, ರಾಜು ಹಡಪದ ಹಾಗೂ ಕಾರ್ಯಕರ್ತರು ಇದ್ದರು.