

ಯಲಬುರ್ಗಾ: ಕ್ಷೇತ್ರದಲ್ಲಿ ಎಲ್‌ಕೆಜಿಯಿಂದ ಪಿಜಿವರೆಗೆ ಅಧ್ಯಯನ ಮಾಡಲು ಸಂಸ್ಥೆ ವ್ಯವಸ್ಥೆ ಕಲ್ಪಿಸಿದೆ. ಮಕ್ಕಳ ಭವಿಷ್ಯ ಉಜ್ವಲವಾಗಲು ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು ಎಂದು ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಕನಕ ಪುರಭವನಕ್ಕೆ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸ್ಥಳಾಂತರ ಹಾಗೂ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲಾಖೆ ಅಧಿಕಾರಿಗಳು ಸಮರ್ಪಕ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ. ರಾಜ್ಯದಲ್ಲಿ ಯಲಬುರ್ಗಾ ಕ್ಷೇತ್ರ ಶಿಕ್ಷಣ, ಅಭಿವೃದ್ಧಿಪರ ಕೆಲಸದಲ್ಲಿ ಪ್ರಥಮ ಸ್ಥಾನದಲ್ಲಿದೆ. ಶಿಕ್ಷಣ ನೀಡುವುದು ಪುಣ್ಯದ ಕೆಲಸ. ಶಿಕ್ಷಕರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದರು.
ಅನುದಾನ ಮಂಜೂರು: ನೂತನ ಬಿಇಒ ಕಚೇರಿಗೆ 2 ಕೋಟಿ ರೂ., ಸಿಡಿಪಿಒ ಇಲಾಖೆಗೆ 3.80 ಕೋಟಿ ರೂ., ತಾಪಂಗೆ 3.50 ಕೋಟಿ ರೂ., ಮುಧೋಳ ವಸತಿ ಶಾಲೆಗೆ 30 ಕೋಟಿ ರೂ., ಬಳಗೇರಿ ವಸತಿ ಶಾಲೆಗೆ 40 ಕೋಟಿ ರೂ., ಚಿಕ್ಕಮ್ಯಾಗೇರಿ ವಸತಿ ಶಾಲೆಗೆ 22 ಕೋಟಿ ರೂ., ಯಲಬುರ್ಗಾ ಬಸ್ ನಿಲ್ದಾಣಕ್ಕೆ 12 ಕೋಟಿ ರೂ. ಮಂಜೂರಾಗಿದೆ. ವಾರದಲ್ಲಿ ಟೆಂಡರ್ ಕಾರ್ಯ ನಡೆಯಲಿದೆ ಎಂದರು.
ಕ್ಷೇತ್ರದ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಹಣ ತಂದರೂ ಜನ ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಬೇಸರದ ಸಂಗತಿ. ಪ್ರಯತ್ನ ಬಿಡದೆ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದರು.
ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒ ಸೋಮಶೇಖರಗೌಡ ಪಾಟೀಲ್, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ, ನಿವೃತ್ತ ಡಿಡಿಪಿಐ ಎಸ್.ಡಿ.ಗಾಂಜಿ, ಬಿಆರ್‌ಸಿ ಸಮನ್ವಯಾಧಿಕಾರಿ ಅಶೋಕ ಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ವೀರನಗೌಡ ಬಳೂಟಗಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಈರಪ್ಪ ಕುಡಗುಂಟಿ, ಕೆರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿ, ಮಲ್ಲಿಕಾರ್ಜುನ ಜಕ್ಕಲಿ, ಬಸವರಾಜ ಮಾಸ್ತಿ, ವೀರಭದ್ರಪ್ಪ ಅಂಗಡಿ, ಎಸ್.ವಿ.ಧರಣಾ ಇದ್ದರು.