

ಯಲಬುರ್ಗಾ: ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ಒದಗಿಸಲು ಒತ್ತಾಯಿಸಿ ಗ್ರಾಮಸ್ಥರು ತಾಲೂಕಿನ ಮುರಡಿ ಗ್ರಾಮ ಪಂಚಾಯಿತಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಮುರಡಿ ಗ್ರಾಮದ 98ನೇ ಸರ್ವೇ ನಂ.ನಲ್ಲಿ 2009-2010ನೇ ಸಾಲಿನಲ್ಲಿ 113 ಫಲಾನುಭವಿಗಳ ನಿವೇಶನ ಒದಗಿಸಲು ಆಯ್ಕೆ ಮಾಡಲಾಗಿದೆ. ಆದರೆ ಹಕ್ಕು ಪತ್ರ ವಿತರಣೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ವಿಳಂಬ ಮಾಡುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಒತ್ತಾಯಿಸಿದರು.
ಮುಖಂಡ ನಾಗರಾಜ ಹಾಲಳ್ಳಿ ಮಾತನಾಡಿ, ಆಶ್ರಯ ಮನೆ ಹಂಚಿಕೆಯಲ್ಲಿ ಗ್ರಾಮ ಸಭೆ ನಡೆಸದೆ ತಾರತಮ್ಯ ಮಾಡಲಾಗಿದ್ದು, ಗ್ರಾಮ ಪಂಚಾಯಿತಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಡವರಿಗೆ ಮನೆ ಮಂಜೂರು ಮಾಡಬೇಕಾದರೆ ಫಲಾನುಭವಿಗಳಿಂದ ಸದಸ್ಯರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹೋರಾಟಗಾರ ಶ್ರೀಕಾಂತಗೌಡ ಪಾಟೀಲ ಮಾತನಾಡಿದರು.
ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ವಸತಿ ಯೋಜನೆಯ ಬಸವರಾಜ ಹಳ್ಳಿ ಮನವಿ ಸ್ವೀಕರಿಸಿ ಮಾತನಾಡಿ, 15 ದಿನ ದೊಳಗಾಗಿ ಹಕ್ಕುಪತ್ರ ವಿತರಿಸುವುದಾಗಿ ಭರವಸೆ ನೀಡಿದರು. ಪ್ರಮುಖರಾದ ಅಯ್ಯನಗೌಡ ಕೆಂಚಮ್ಮನವರ, ಭೀಮಜ್ಜ ಗುರಿಕಾರ,ಸಿದ್ದು ಮಣ್ಣಿನವರ, ಪುರಂದಪ್ಪ ಹರಿಜನ, ಮುನಿಯಪ್ಪ ಗುರಿಕಾರ, ಪಾಂಡು ಛಲವಾದಿ, ಬಸಣ್ಣ ಗುರಿಕಾರ ಹವಳೇಪ್ಪ ತಳವಾರ, ಗವಿಸಿದ್ದಪ್ಪ ಬಾರಕೇರಿ, ಸಣ್ಣ ಬಾಳಪ್ಪ ಬಂಡಾರಿ ಇತರರಿದ್ದರು.