

ಯಲಬುರ್ಗಾ: ಏ.30ರಂದು ಸಂಭ್ರಮ, ಸಡಗರದಿಂದ ಬಸವ ಜಯಂತಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ತಹಸಿಲ್ ಕಾರ್ಯಾಲಯದಲ್ಲಿ ಬಸವೇಶ್ವರರ ಜಯಂತ್ಯುತ್ಸವ ಕುರಿತು ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅಂದು ಬೆಳಗ್ಗೆ 9 ಗಂಟೆಗೆ ತಾಲೂಕು ಆಡಳಿತ ಹಾಗೂ ಜಯಂತ್ಯುತ್ಸವ ಸಮಿತಿಯಿಂದ ಸಾಂಸ್ಕೃತಿಕ ನಾಯಕ ಬಸವೇಶ್ವರ ಭಾವಚಿತ್ರ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮವನ್ನು ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಒಳಗೊಂಡಂತೆ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು, ಆಮಂತ್ರಣ ಪತ್ರಿಕೆ ಸಿದ್ಧಪಡಿಸಿ ಗಣ್ಯರಿಗೆ ಮುಂಚಿತವಾಗಿ ವಿತರಿಸುವುದು ಮತ್ತು ಉಪನ್ಯಾಸಕರನ್ನು ಕರೆತರುವುದು ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ತಾಲೂಕಿನಾದ್ಯಂತ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಏ.30 ರಂದು ಬಸವ ಜಯಂತಿಯನ್ನು ತಪ್ಪದೆ ಆಚರಣೆ ಮಾಡಬೇಕು ಎಂದರು.