

ಯಲಬುರ್ಗಾ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಹತ್ಯೆಗೈದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಕರ್ನಾಟಕ ಕುರಿಗಾರರ ಮತ್ತು ಪಶುಪಾಲಕರ ಹಿತರಕ್ಷಣಾ ಸಮಿತಿ ತಾಲೂಕು ಘಟಕ ಪಟ್ಟಣದಲ್ಲಿ ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ಬುಧವಾರ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಅವರನ್ನು ಕುರಿ ಕಳ್ಳತನ ಮಾಡುವ ಗುಂಪು ಕ್ರೂರವಾಗಿ ಹತ್ಯೆ ಮಾಡಿದೆ. ಈ ಹಿಂದೆಯೂ ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ಕುರಿಗಾಹಿಗಳನ್ನು ಕೊಲೆ ಮಾಡಲಾಗಿದೆ. ಅಲ್ಲದೆ ಗುಡ್ಡಗಾಡಿನಲ್ಲಿ ಕುರಿ ಮೇಯಿಸಲು ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಿರಂತರ ಕಿರುಕುಳ ಹಾಗೂ ದೌರ್ಜನ್ಯಕ್ಕೆ ಒಳಗಾಗುವಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಕುರಿಗಾಹಿ ಶರಣಪ್ಪ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಕರ್ನಾಟಕ ರಾಜ್ಯ ಕುರಿಗಾಹಿಗಳ ಹಿತರಕ್ಷಣಾ ( ರಕ್ಷಣೆ ಮತ್ತು ದೌರ್ಜನ್ಯ ತಡೆ) ಕಾಯ್ದೆಯನ್ನು ಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಛತ್ರಪ್ಪ ಛಲವಾದಿ, ಶಿವಪ್ಪ ದಂಡಿನ, ಸಿದ್ದಪ್ಪ ದಂಡಿನ, ಸಿದ್ದಪ್ಪ ಬಂಡಿಹಾಳ, ದ್ರಾಮಣ ಪರಂಗಿ, ಬಾಲಪ್ಪ ಕುರಿ, ರಾಮಣ್ಣ ದಂಡಿನ, ಬಸವರಾಜ ಹಡಪದ ಇತರರಿದ್ದರು.