

ಯಲಬುರ್ಗಾ: ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಒದಗಿಸಲು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ ಸಂಯೋಜಿತ) ಪಟ್ಟಣದ ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ಗುರುವಾರ ಮನವಿ ಸಲ್ಲಿಸಿತು.
ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಶಂಕ್ರಮ್ಮ ಹಳ್ಳಿಕೇರಿ ಮಾತನಾಡಿ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರು ಕಳೆದ ಹಲವಾರು ದಶಕಗಳಿಂದ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಯೋಜನೆಗಳಲ್ಲಿ ಗೌರವಧನ, ಪ್ರೋತ್ಸಾಹಧನದ ಹೆಸರಿನಲ್ಲಿ ದೇಶದ ಲಕ್ಷಾಂತರ ಮಹಿಳಾ ಕಾರ್ಮಿಕರಿಂದ ಸೇವೆ ಪಡೆದುಕೊಳ್ಳುತ್ತಿದೆ. ಕನಿಷ್ಠ ವೇತನ, ಸೇವಾಭದ್ರತೆ ಇಲ್ಲದೆ ಕಾರ್ಮಿಕರ ಹಕ್ಕುಗಳಿಂದ ವಂಚಿತರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ದೀಪಾ ಗೊಂದಳೆ ಮಾತನಾಡಿ, ಸೇವೆ ಕಾಯಂ ಹಾಗೂ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು. ಕನಿಷ್ಠ 28 ಸಾವಿರ ರೂ. ವೇತನ ಜಾರಿ ನೀಡಬೇಕು. ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸಬೇಕು. ಯಾವುದೇ ರೂಪದಲ್ಲಿ ಖಾಸಗೀಕರಣ ಬೇಡ. ಮನರೇಗಾಕ್ಕೆ ಹೆಚ್ಚಿನ ಅನುದಾನ ನೀಡಿ, ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಶೋಭಾ ಹೂಗಾರ, ಶಾಂತಾ ಹಿರೇಮಠ, ಭಾಗ್ಯಮ್ಮ ಗೊಲ್ಲರ, ಶಾರದಾ ವಡ್ಡರ, ಪರಿಮಳಾ ಬಡಿಗೇರ, ಹನುಮಕ್ಕ ಇಂಗಳದಾಳ, ಸರೋಜಾ ಮಾಲಿಪಾಟೀಲ್, ಸರೋಜಾ ಮೇಟಿ, ರಾಮವ್ವ ಮಾಳಿ, ಮಂಜುಳಾ ಮಾಳಿ, ಅನ್ನಕ್ಕ ಚಿಣಗಿ, ಹನುಮಕ್ಕ ದಾಸರ, ಯಮನವ್ವ ಉಚ್ಚಲಕುಂಟಿ ಶಾಂತಾ ತಳವಾರ ಇತರರಿದ್ದರು.