

ಯಲಬುರ್ಗಾ: ದೇಶಕ್ಕೆ ಅಹಿಂಸೆ ಮೂಲಕ ಸ್ವಾತಂತ್ರೃ ಬಂದಿದೆ ಎಂದು ಇಂದಿಗೂ ಪ್ರಚಾರ ಮಾಡಲಾಗುತ್ತಿದೆ. ಭಗತ್ ಸಿಂಗ್, ನೇತಾಜಿ, ಖುದಿರಾಮ್ ಬೋಸ್, ಲಾಲಾ ಲಜಪತ್ ರಾಯ್ ಮುಂತಾದ ಕ್ರಾಂತಿಕಾರಿಗಳು ಈ ದೇಶಕ್ಕಾಗಿ ರಕ್ತ ಹರಿಸಿದ್ದಾರೆ ಎಂದು ಎಐಡಿವೈಒ ಸಂಘಟನೆ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಭವಾನಿ ಶಂಕರ್ ಹೇಳಿದರು.
ಪಟ್ಟಣದಲ್ಲಿ ಎಸ್.ಎ. ನಿಂಗೋಜಿ ಬಿ.ಇಡಿ ಕಾಲೇಜು ಮತ್ತು ಎಐಡಿವೈಓ ಸಂಘಟನೆ ಸಹಯೋಗದಲ್ಲಿ ಶನಿವಾರ ಸ್ವಾತಂತ್ರೃ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ 94ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊಟ್ಟ ಮೊದಲಿಗೆ ಬ್ರಿಟಿಷರ ವಿರುದ್ಧ ಬಂಡೆದ್ದ ಚಾಪೆಕರ್ ಸೋದರರನ್ನು ಗಲ್ಲಿಗೇರಿಸಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗಿತ್ತು. ಅದನ್ನೇ ಪ್ರೇರಣೆಯಾಗಿಸಿಕೊಂಡ ಕ್ರಾಂತಿಕಾರಿಗಳು ಸ್ವಾತಂತ್ರೃಕ್ಕಾಗಿ ಪ್ರಾಣತ್ಯಾಗ ಮಾಡಲು ಸರದಿಯಲ್ಲಿ ನಿಲ್ಲಬೇಕಾಯಿತು. ಭಗತ್ ಸಿಂಗ್ ಅವರನ್ನು ತ್ಯಾಗ, ಸಾಹಸದಿಂದ ಮಾತ್ರ ಜನರು ಗುರುತಿಸಿಲ್ಲ. ಬದಲಾಗಿ ಅವರು ನಂಬಿರುವ ಕ್ರಾಂತಿಕಾರಿ ವಿಚಾರಗಳು, ಮಾನವನಿಂದ ಮಾನವನ ಶೋಷಣೆ ನಿಲ್ಲಬೇಕೆಂಬ ಪ್ರತಿಪಾದನೆಯಿಂದ. ಜಾತಿವಾದ, ಕೋಮುವಾದ ಹೋಗಿ ಸೌಹಾರ್ದಯುತ, ಪ್ರಜಾತಂತ್ರ ಮೌಲ್ಯಗಳು ಇಲ್ಲದಿದ್ದರೆ ಇಂದು ಸ್ವಾತಂತ್ರೃಸಿಕ್ಕರೂ ವ್ಯರ್ಥವೆಂದು ಭಗತ್ ಸಿಂಗ್ ಅಂದೆ ಹೇಳಿದ್ದರು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಪ್ರಕಾಶ್ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ. ಅಂದಿನ ಯುವಕರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಇಂದಿನ ಯುವಕರು ಮೊಬೈಲ್, ಸಾಮಾಜಿಕ ಮಾಧ್ಯಮಗಳಿಗೆ ಆಕರ್ಷಿತರಾಗಿ ಬಲಿಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.