

ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ರಾಜ್ಯ ಬಿಜೆಪಿ ಹಾಗೂ ಸರ್ಕಾರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಈ ಸಂಬಂಧ ಶುಕ್ರವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಮತ್ತು ಸಿಎಂ ಯಡಿಯೂರಪ್ಪ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕೂಡ ದೆಹಲಿಗೆ ಆಗಮಿಸಿದ್ದಾರೆ.
ಸಂಪುಟ ಸೇರಲು ಆಕಾಂಕ್ಷಿಗಳು ಹಲವರಿದ್ದರೂ, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆಕಾಂಕ್ಷಿಗಳಾದ ಎಚ್. ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ, ಮುರುಗೇಶ್ ನಿರಾಣಿ ದೆಹಲಿಯಲ್ಲಿದ್ದು, ಯಡಿಯೂರಪ್ಪ ಮೇಲೆ ಒತ್ತಡ ಹೇರುವ ಯತ್ನ ಮುಂದುವರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಪರ ಲಾಬಿ ನಡೆಸಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ 2 ದಿನ ಮೊದಲೇ ದೆಹಲಿಗೆ ಬಂದು ವರಿಷ್ಠ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಸಂಪುಟದಿಂದ ಕೆಲವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಚರ್ಚೆ ಕೂಡ ಕೇಳಿಬಂದಿದೆ. ಈ ನಿಟ್ಟಿನಲ್ಲಿ, ಬಿ.ಎಲ್. ಸಂತೋಷ್ ಅಭಿಪ್ರಾಯ ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ. ಲಭ್ಯ ಮಾಹಿತಿ ಪ್ರಕಾರ ಅಕ್ಟೋಬರ್ ಮೊದಲ ವಾರದಲ್ಲಿ ಪುನಾರಚನೆಯನ್ನೇ ಮಾಡುವಂತೆ ಯಡಿಯೂರಪ್ಪ ಅವರಿಗೆ ಸೂಚಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. 5-6 ಜನರನ್ನು ಕೈಬಿಟ್ಟು ಹೊಸದಾಗಿ 10-12 ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಹೇಳಬಹುದೆಂದು ಮೂಲಗಳು ಹೇಳಿವೆ.
ಅನುದಾನಕ್ಕೆ ಹೆಚ್ಚಿದ ಒತ್ತಡ
ಕೋವಿಡ್ ಎಫೆಕ್ಟ್ನಿಂದ ತತ್ತರಿಸಿರುವ ಆರ್ಥಿಕ ಸ್ಥಿತಿ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಸಿಎಂ ಯಡಿಯೂರಪ್ಪ ಅವರಿಗೆ ನಿತ್ಯವೂ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಶಾಸಕರಿಂದ ಒತ್ತಡ ಬರುತ್ತಿರುವುದು ಸಂಕಷ್ಟ ತಂದೊಡ್ಡಿದೆ. ಸೋಮವಾರದಿಂದ ವಿಧಾನ ಮಂಡಲ ಕಲಾಪ ಪ್ರಾರಂಭ ಆಗುವುದರಿಂದ ಶಾಸಕರ ಸಹಕಾರವೂ ಬಹಳ ಮುಖ್ಯ. ಅದಕ್ಕಾಗಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರ ಜತೆಗೆ ಸಭೆಗಳನ್ನು ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಿಎಂ ಕಾರ್ಯೋನ್ಮುಖರಾಗಿದ್ದಾರೆ.
ಪ್ರಧಾನಿ-ಸಿಎಂ ಮಾತುಕತೆ
ದೆಹಲಿಯ ಸಂಸತ್ ಭವನದಲ್ಲಿ ಶುಕ್ರವಾರ ಬೆಳಗ್ಗೆ 9.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಭೇಟಿ ನಿಗದಿ ಆಗಿದ್ದು, ಈ ವೇಳೆ ರಾಜ್ಯದ ವಿವಿಧ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಿದ್ದಾರೆ. ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ. ನಂತರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್, ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪೂರಿ, ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರ ಭೇಟಿಗೂ ಸಮಯ ನಿಗದಿಪಡಿಸಲಾಗಿದೆ. 19ರಂದೂ ಯಡಿಯೂರಪ್ಪ ದೆಹಲಿಯಲ್ಲಿ ಇರಲಿದ್ದಾರೆ.
ಬಿಎಸ್ವೈ-ಸಂತೋಷ್ ಚರ್ಚೆ
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಗುರುವಾರ ರಾತ್ರಿ 9.30ಕ್ಕೆ ಬಿಎಸ್ವೈ ಅವರನ್ನು ಭೇಟಿ ಮಾಡಿದರು. ಸಂಪುಟ ವಿಸ್ತರಿಸಬೇಕೋ ಅಥವಾ ಪುನಾರಚಿಸಬೇಕೋ? ಯಾರಿಗೆ ಅವಕಾಶ ಕೊಟ್ಟರೆ ಪಕ್ಷಕ್ಕೆ ಲಾಭವಾಗುತ್ತದೆ? ಜಾತಿ ಸಮೀಕರಣ ಇತ್ಯಾದಿ ವಿಚಾರದಲ್ಲಿ ಇಬ್ಬರು ನಾಯಕರು ಚರ್ಚೆ ನಡೆಸಿದರು.
ಷಾ ಭೇಟಿ ಅಸಾಧ್ಯ: ಪುಟ ವಿಸ್ತರಣೆ ಸಂಬಂಧ ಅಮಿತ್ ಷಾ ಜತೆಗೂ ಚರ್ಚೆ ನಡೆಯಬೇಕು. ಆದರೆ, ಅನಾರೋಗ್ಯ ಹಿನ್ನೆಲೆಯಲ್ಲಿ ಅಮಿತ್ ಷಾ ಏಮ್ಸ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಹೀಗಾಗಿ, ಅವರ ಭೇಟಿ ಅಸಾಧ್ಯ ಎನ್ನಲಾಗುತ್ತಿದೆ.
-ಠಿ;5400 ಕೋಟಿ ಪರಿಹಾರ ಬೇಡಿಕೆ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ ನಷ್ಟ ಬಾಬ್ತು ಕೊಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದ್ದರಿಂದ ಚಿಂತಿತವಾಗಿರುವ ರಾಜ್ಯ ಸರ್ಕಾರ, ಕೇಂದ್ರ ಹಣಕಾಸು ಸಚಿವರ ಮುಂದೆ ಹೆಚ್ಚಿನ ಪರಿಹಾರಕ್ಕೆ ಪಟ್ಟು ಹಿಡಿದಿದೆ. ಗುರುವಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಸಿಎಂ, ಜಿಎಸ್ಟಿ ಕೊರತೆಯಿಂದ ನಿತ್ಯ ನಿರ್ವಹಣೆಯೂ ಕಷ್ಟವಾಗಲಿದೆ. ಅಭಿವೃದ್ಧಿ ಕಾಮಗಾರಿ ಸಂಪೂರ್ಣ ನಿಲ್ಲಲಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ನೆರವು ಹೆಚ್ಚು ಕೊಡಬೇಕೆಂದು ಕೋರಿದ್ದಾರೆೆ. ಜಿಎಸ್ಟಿ ನಷ್ಟ ಪರಿಹಾರದಡಿ 5400 ಕೋಟಿ ರೂ. ಹೆಚ್ಚುವರಿ ಪರಿಹಾರವನ್ನಾದರೂ ಕೊಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿತ್ತು. ಕರೊನಾ, ನೆರೆ ಪರಿಹಾರದಿಂದ ಸರ್ಕಾರಿ ನೌಕರರ ವೇತನಕ್ಕೂ ಹಣ ಹೊಂದಿಸಬೇಕಾದ್ದರಿಂದ ರಾಜ್ಯದ ಬಗ್ಗೆ ವಿಶೇಷ ಗಮನ ಕೊಡಬೇಕೆಂದು ಕೋರಲಾಗಿದೆ ಎಂಬುದು ತಿಳಿದುಬಂದಿದೆ.