ಹೋರಾಟ ಎಂಬುದಕ್ಕೆ ಪರ್ಯಾಯ ಪದ ಬಿಎಸ್​ವೈ: ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಬಣ್ಣನೆ

bsy
Published on

ಹಾರೋಹಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನದಿಂದ ಆರಂಭಿಸಿ, ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಸ್ಥಾನ ಗಳಿಸುವಂತೆ ಪಕ್ಷ ಸಂಘಟನೆ ಮಾಡಿದ ಬಿ.ಎಸ್. ಯಡಿಯೂರಪ್ಪ, ಹೋರಾಟ ಎಂಬುದಕ್ಕೆ ಪರ್ಯಾಯ ಪದವಾಗಿದ್ದಾರೆ ಎಂದು ಕೆಡಿಪಿ ಸದಸ್ಯ ಮತ್ತು ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ. ರುದ್ರೇಶ ಬಣ್ಣಿಸಿದ್ದಾರೆ.

ಸ್ವಾಮಿ ವಿವೇಕಾನಂದ ಚಾರಿಟಬಲ್ ಟ್ರಸ್ಟ್, ಡಾ. ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ಹೊಯ್ಸಳ ಯುವಕರ ಸಂಘದ ಆಶ್ರಯದಲ್ಲಿ ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಬಿಎಸ್​ವೈ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಮತ್ತು ಪ್ರೌಢಾವಸ್ಥೆ ತಲುಪಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ ಮತ್ತು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಯಡಿಯೂರಪ್ಪನವರು ಹೋರಾಟಗಳಿಂದಲೇ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಒಂದು ಶಿಕ್ಷಣ ಕ್ಷೇತ್ರದ ಸಾಧನೆಯಾಗಿದೆ. ಪಶು ಸಾಕಾಣಿಕೆ ಮಾಡುವ ರೈತರಿಗೆ ಅನುಕೂಲವಾಗಲು ಹಾಲಿಗೆ ಸಹಾಯಧನ ಹೆಚ್ಚಳ ಮಾಡಿದ್ದಾರೆ. ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದು ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. 78ನೇ ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ, ‘ಕಾಲಿಗೆ ಚಕ್ರ ಕಟ್ಟಿಕೊಂಡು’ ಅಭಿವೃದ್ಧಿ ಮಾಡುತ್ತಿದ್ದು, ಮುಂದಿನ ಅವಧಿಗಳಲ್ಲಿಯೂ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿರಾಜುಗೌಡ, ಉಪ ವಿಭಾಗಾಧಿಕಾರಿ ಡಾ. ದಾಕ್ಷಾಯಿಣಿ, ರಾಮನಗರ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಸ್. ಮುರಳೀಧರ್, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ನಾಗರಾಜು, ಮುಖಂಡರಾದ ಪ್ರವೀಣ್​ಗೌಡ, ನಾಗಾನಂದ್ ಮತ್ತಿತರರು ಉಪಸ್ಥಿತರಿದ್ದರು.

ಯಡಿಯೂರಪ್ಪ ಮೇರು ವ್ಯಕ್ತಿತ್ವ: ರಾಜ್ಯದಲ್ಲಿ ಮೊದಲ ಬಾರಿಗೆ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತಂದವರು, ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್, ಸೈಕಲ್ ವಿತರಣೆಯಂತಹ ಯೋಜನೆಗಳ ಹರಿಕಾರ ಯಡಿಯೂರಪ್ಪ ಆಗಿದ್ದಾರೆ. ಕೇವಲ 1 ಶಾಸಕ ಸ್ಥಾನದಿಂದ ಗೆಲುವು ಆರಂಭಿಸಿದ ಬಿಜೆಪಿ, 119 ಸ್ಥಾನ ಗೆದ್ದು ಸರ್ಕಾರ ರಚಿಸುವ ಮಟ್ಟಿಗೆ ಪಕ್ಷವನ್ನು ಬೆಳೆಸಿದ್ದಾರೆ. ಶ್ರೇಷ್ಠ ನಾಯಕರಾಗಿರುವ ಯಡಿಯೂರಪ್ಪ ಅವರು ಎಲ್ಲ ಸಮುದಾಯಗಳ ಹಿತ ಕಾಯುವ ಮೇರು ವ್ಯಕ್ತಿತ್ವದವರು ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಬಣ್ಣಿಸಿದರು.

1,600 ಜನರ ತಪಾಸಣೆ: ಆರೋಗ್ಯ ತಪಾಸಣಾ ಶಿಬಿರದಲ್ಲಿ ಚರ್ಮರೋಗ, ಮೂಳೆ ರೋಗ, ಕಿವಿ ಮತ್ತು ಮೂಗು, ಮಹಿಳೆಯರ ಪ್ರಸವಪೂರ್ವ ಮತ್ತು ನಂತರ ಗರ್ಭ ತಪಾಸಣೆ, 300 ವಿದ್ಯಾರ್ಥಿನಿಯರಿಗೆ ಆಪ್ತ ಸಮಾಲೋಚನೆ, ಮಧುಮೇಹ, ಹೃದ್ರೋಗ ಸಮಸ್ಯೆಗಳಿಗೆ ಬೆಳಗ್ಗೆಯಿಂದ ಸಂಜೆವರೆಗೆ ಉಚಿತ ತಪಾಸಣೆ ಮಾಡಲಾಯಿತು. 25 ವೈದ್ಯರು, 10 ಶುಶ್ರೂಷಕರು ಮತ್ತು ಸಹಾಯಕರು ತಪಾಸಣೆ ಮಾಡಿದರು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸೇರಿ 1,600ಕ್ಕೂ ಹೆಚ್ಚು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು.

1,500ಕ್ಕೂ ಹೆಚ್ಚು ಸಸಿ ವಿತರಣೆ: ಅಂಗವಿಕಲ ಮಕ್ಕಳಿಗೆ ವ್ಹೀಲ್ ಚೇರ್, ಕಣ್ಣಿನ ದೋಷವುಳ್ಳವರಿಗೆ ಉಚಿತ ತಪಾಸಣೆ ಮತ್ತು ಕನ್ನಡಕ ನೀಡಲಾಯಿತು. ಹಸಿರೀಕರಣ ಉದ್ದೇಶದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ 1,500ಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡಲಾಯಿತು.

ಆಧುನಿಕ ಚಿಕಿತ್ಸಾ ಸೌಲಭ್ಯ: ಡಾ. ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆಯಲ್ಲಿ 300 ಹಾಸಿಗೆ ಸೌಲಭ್ಯಗಳಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಸೌಲಭ್ಯಗಳನ್ನು ಅಳವಡಿಕೆ ಮಾಡಿಕೊಂಡು ಸ್ಥಳೀಯರಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತೇವೆ. ಮುಖ್ಯಮಂತ್ರಿ ಜನ್ಮದಿನದ ಪ್ರಯುಕ್ತ ಉಚಿತ ಚಿಕಿತ್ಸೆ ನೀಡುತ್ತಿರುವುದು ನಮಗೆ ಸಂತಸವಾಗಿದೆ. ಇಂತಹ ಸೇವೆಗಳನ್ನು ನಿರಂತರವಾಗಿ ಮುಂದುವರಿಸುತ್ತೇವೆ ಎಂದು ದಯಾನಂದ ಸಾಗರ್ ವೈದ್ಯಕೀಯ ವಿಶ್ವವಿದ್ಯಾಲಯದ ಡೀನ್ ಡಾ. ಅಶೋಕ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net