

ಗುಬ್ಬಿ: 24 ಗಂಟೆಯಲ್ಲಿ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆ ಬಲಪಡಿಸುತ್ತೇವೆ ಎಂದು ಹೇಳಿದ್ದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಮೂರು ತಿಂಗಳಾದರೂ ತುಟಿ ಬಿಚ್ಚಲಿಲ್ಲ. ಇತ್ತೀಚೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಎಸಿಬಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿಕೆ ನೀಡಿ ಮಂಗಳವಾಡಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್‌ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಗುಬ್ಬಿ ತಾಲೂಕಿನ ಕಡಬ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಪ್ರಯುಕ್ತ ಮಂಗಳವಾರ ನಿವೃತ್ತ ನಾಸಾ ವಿಜ್ಞಾನಿ ಗೋಪಾಲ ಅಯ್ಯಂಗಾರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಸಿಬಿಯನ್ನೇ ಬಲಿಷ್ಠಗೊಳಿಸುವುದಾಗಿ ಹೇಳುವ ಸರ್ಕಾರಕ್ಕೆ ಲೋಕಾಯುಕ್ತ ಬೇಕಿಲ್ಲ. ಲೋಕಾಯುಕ್ತ ಸಂಸ್ಥೆ ಅಧಿಕಾರವಿದ್ದಾಗ ಆಡಳಿತ ಪಕ್ಷದವರು ಸೇರಿ ಎಲ್ಲ ಮುಖಂಡರು, ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವ ಹಕ್ಕು ಹೊಂದಿತ್ತು. ಆದರೆ ಎಸಿಬಿಯಲ್ಲಿ ಒಂದು ಹಂತದ ಅಧಿಕಾರಿ ಹಾಗೂ ನಾಯಕರ ಮೇಲೆ ವಿಚಾರಣೆ ಮಾಡುವಾಗ ಸರ್ಕಾರದ ಅನುಮತಿ ಅವಶ್ಯವಿದೆ. ಈ ನಿಯಮವೇ ಭ್ರಷ್ಟಾಚಾರಕ್ಕೆ ಪುಷ್ಠಿ ನೀಡುತ್ತಿದೆ. ತನಿಖೆಗೆ ಒಳಪಡಿಸಲು ಅಸಾಧ್ಯವಾದಲ್ಲಿ ಸತ್ಯಾಸತ್ಯತೆ ಹೊರತರುವುದು ಹೇಗೆ ಎಂದು ಪ್ರಶ್ನಿಸಿದರು.
ನಾಸಾ ನಿವೃತ್ತ ವಿಜ್ಞಾನಿ ಗೋಪಾಲ್ ಅಯ್ಯಂಗಾರ್ ಮಾತನಾಡಿ, ಕಡಬ ಗ್ರಾಮದಲ್ಲಿ ಹುಟ್ಟಿ ಪ್ರಾಥಮಿಕ ಹಂತದ ಶಿಕ್ಷಣ ಪಡೆದು ನಂತರ ಮೂರು ದಶಕಗಳ ಕಾಲ ವಿಜ್ಞಾನಿಯಾಗಿ ನಾಸಾದಲ್ಲಿ ಕೆಲಸ ಮಾಡಿದ್ದೇನೆ. ಈಗಲೂ ಅಲ್ಲಿಯೇ ಇದ್ದು ಸಮಾಜಸೇವಾ ಕೆಲಸ ಮಾಡುತ್ತಿದ್ದೇನೆ. ಕಡಬ ಶಾಲೆಯಲ್ಲಿ ಓದಿರುವ ನನಗೆ ಶಾಲೆಯ ಬಗ್ಗೆ ಹೆಮ್ಮೆ ಇಟ್ಟುಕೊಂಡು ಇಲ್ಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ಸಹಕಾರ ಮಾಡಿದ್ದೇನೆ. ಗ್ರಾಮೀಣ ಭಾಗದಲ್ಲಿದ್ದು ಕೀಳರಿಮೆ ಬೆಳೆಸಿಕೊಳ್ಳದೇ ನಿರಂತರ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ತರುವಂತೆ ಕರೆ ನೀಡಿದರು.
ತಾಪಂ ಸದಸ್ಯೆ ಸುಧಾಮಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಗೌರಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಯ್ಯ, ಪ್ರಾಂಶುಪಾಲ ಎಚ್.ಕೆ.ನರಸಿಂಹಮೂರ್ತಿ, ಕಾಲೇಜು ಶಿಕ್ಷಣ ಸಮಿತಿ ಅಧ್ಯಕ್ಷ ಎನ್.ವೆಂಕಟೇಶ್, ಸಂಪನ್ಮೂಲ ವ್ಯಕ್ತಿ ಗುರುಪ್ರಸಾದ್, ಉಪ ಪ್ರಾಂಶುಪಾಲ ವೆಂಕಟೇಶ್, ಉಪನ್ಯಾಸಕರಾದ ಶಿವಣ್ಣ, ಶಿವಕುಮಾರ್ ಇದ್ದರು.
ಪ್ರತಿಭಟನೆಯಿಂದ ಭವಿಷ್ಯ ಹಾಳು: ವಿದ್ಯಾರ್ಥಿಗಳು ಪ್ರತಿಭಟನೆಗಿಳಿದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೋರಾಟಕ್ಕೆ ಶಿಕ್ಷಣ ಬಿಟ್ಟು ರಾಜಕೀಯ ಪಕ್ಷ ಸೇರಿಕೊಂಡು ಮುಂದುವರಿಸುವುದು ಸೂಕ್ತ. ಕೆಲವು ರಾಜಕೀಯ ವ್ಯಕ್ತಿಗಳು ಯುವಕರನ್ನು ಬಳಸಿಕೊಂಡು ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿದ್ದಾರೆ. ದಾರಿ ತಪ್ಪಿಸಿ ಶಿಕ್ಷಣ ಮೊಟಕುಗೊಳಿಸುತ್ತಾರೆ. ಈ ಬಗ್ಗೆ ಎಚ್ಚರಿಕೆ ನಡೆ ಯುವಕರಲ್ಲಿ ಬರಬೇಕಿದೆ. ಪ್ರತೀ ವಿದ್ಯಾರ್ಥಿಯು ಶಾಂತಿಮಂತ್ರ ಪಠಿಸಬೇಕೇ ಹೊರತು ಕ್ರಾಂತಿ ಮಂತ್ರವಲ್ಲ. ಸಮಾಜದಲ್ಲಿ ನಿಸ್ವಾರ್ಥ ಬಿಟ್ಟರೆ ಎಲ್ಲವು ಸರಿಹೋಗುತ್ತದೆ ದೇಶದ ಮುಂದಿನ ಯುವಶಕ್ತಿ ನೀವಾಗಿದ್ದು ಯೋಚನೆ ಮಾಡಿ ಮುನ್ನಡೆಯಿರಿ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಸಲಹೆ ನೀಡಿದರು.