

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನಗಿಂತ ಹಿರಿಯರು. ಅಗಾಧ ಅನುಭವವುಳ್ಳವರು. ಅವರಿಗೆ ನಾನೇನು ಸಲಹೆ ನೀಡಲಿ. ರಾಜ್ಯ ಬಿಜೆಪಿಗೆ ಅವರದ್ದೇ ನಾಯಕತ್ವ. ಅಭಿವೃದ್ಧಿಗೆ ಸಂಬಂಧಿಸಿ ಸಮಾಜದ ಎಲ್ಲ ವರ್ಗವನ್ನು ತಲುಪುತ್ತಿದ್ದಾರೆ. ಅವರ ನಾಯಕತ್ವವನ್ನು ಅನುಮಾನಿಸುವುದೇ ಬೇಡ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪುನರುಚ್ಚರಿಸಿದರು.
ದೆಹಲಿಯಲ್ಲಿ ವಿಜಯವಾಣಿ ಜತೆ ಮಾತನಾಡಿದ ಅವರು, ಬಿಎಸ್ವೈ ಆಡಳಿತ ವೈಖರಿಯನ್ನು ಪ್ರಶ್ನಿಸುವ ಅಗತ್ಯವೇ ಇಲ್ಲ. ಅವರ ವಿರುದ್ಧ ಯಾರೂ ದೂರನ್ನೂ ಕೊಟ್ಟಿಲ್ಲ. ಪದೇ ಪದೇ ಈ ವಿಚಾರಗಳು ಮಾಧ್ಯಮದಲ್ಲಿ ಏಕೆ ಚರ್ಚೆಯಾಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಸಂಘಟನೆ ಬಲಗೊಳ್ಳಲು ಮತ್ತು ಉತ್ತಮ ಆಡಳಿತಕ್ಕೆ ಪಕ್ಷಕ್ಕೆ ಅವರೇ ಸಾರಥಿ ಎಂದಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ರಾಜ್ಯದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಬಲ್ಲ ಬಲಶಾಲಿ ಪಕ್ಷ. ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಅತಿದೊಡ್ಡ ಪಕ್ಷ ಎಂಬ ಹೆಗ್ಗಳಿಕೆ ನಮ್ಮದು. ಸಂಘಟನೆಯೇ ನಮ್ಮ ಶಕ್ತಿಯಾಗಿರುವಾಗ ಮೈತ್ರಿಯ ಮಾತೇಕೆ ಎಂದು ಪ್ರಶ್ನಿಸಿದರು.
ಜನವರಿಯಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವುದೇ ಎಂಬ ಪ್ರಶ್ನೆಗೆ, ಸೂಕ್ತ ಸಮಯಕ್ಕೆ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ. ಶುಭ ಸುದ್ದಿ ಯಾವಾಗ ಬೇಕಾದರೂ ಬರಬಹುದು. ನೀವು ಕಾದುನೋಡಿ. ವಿಸ್ತರಣೆ ವಿಳಂಬಕ್ಕೆ ಬಿಎಸ್ವೈಗೆ ಬೇಸರವಾಗಿಲ್ಲ. ಹೈಕಮಾಂಡ್ ಜತೆಗೂ ಈ ಬಗ್ಗೆ ವಿಸõತ ಚರ್ಚೆಯಾಗಬೇಕು. ಅಧ್ಯಕ್ಷರಿಗೆ ಕರೊನಾ ಪಾಸಿಟಿವ್ ಆಗಿರುವುದರಿಂದ ಸ್ವಲ್ಪ ದಿನ ಕಾಯಬೇಕು ಎಂದು ತಿಳಿಸಿದ್ದಾರೆ.
ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬ ವಿಚಾರದಲ್ಲಿ ಸಿಎಂ ಪರಮಾಧಿಕಾರವನ್ನು ಹೈಕಮಾಂಡ್ ಕಿತ್ತುಕೊಳ್ಳುತ್ತಿದೆ ಎಂಬ ಆರೋಪ ತಳ್ಳಿಹಾಕಿದ ಅವರು, ಖಂಡಿತವಾಗಿಯೂ ಅವರಿಗೆ ಪರಮಾಧಿಕಾರವಿದೆ ಮತ್ತು ಅಧಿಕಾರ ಹಂಚಿಕೆಯಲ್ಲಿ ಹಸ್ತಕ್ಷೇಪವಿಲ್ಲ. ಆದರೆ, ನಮ್ಮದು ರಾಷ್ಟ್ರೀಯ ಪಕ್ಷ. ಇಲ್ಲಿ ಚರ್ಚೆ, ಸಂವಾದ ನಡೆದೇ ಎಲ್ಲ ತೀರ್ವನಗಳಾಗುತ್ತವೆ ಎಂದು ವಿವರಿಸಿದರು.
ಬಿಎಸ್ವೈ ಪುತ್ರ ವಿಜಯೇಂದ್ರರು ಪಕ್ಷದ ಉಪಾಧ್ಯಕ್ಷರು ಮತ್ತು ಸಂಘಟನೆ ಬಲಗೊಳಿಸುವಲ್ಲಿ ತೊಡಗಿಕೊಂಡಿದ್ದಾರೆ. ಸರ್ಕಾರದ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂಬ ದೂರು ನನ್ನ ಬಳಿ ಬಂದಿಲ್ಲ. ಪಕ್ಷದ ಏಳಿಗೆಗೆ ಪರಿಶ್ರಮ ಹಾಕುತ್ತಿದ್ದಾರೆ ಮತ್ತು ಪಕ್ಷದ ನಿಷ್ಠಾವಂತ ಕೆಲಸಗಾರ ಕೂಡ ಹೌದು ಎಂದರು.
ಜನವರಿ 2ಕ್ಕೆ ರಾಜ್ಯಕ್ಕೆ
ಜ.2ರಂದು ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಶಿವಮೊಗ್ಗ ದಲ್ಲಿ ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ. ಡಿ.20ರಂದೇ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಆದರೆ ಕಾರಣಾಂತರಗಳಿಂದ ರದ್ದಾದ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲೂಬಹುದು ಎಂದು ಹೇಳಲಾಗುತ್ತಿದೆ.
ಅನಗತ್ಯ ಹೇಳಿಕೆ ನೀಡದಂತೆ ತಾಕೀತು
ಬೆಂಗಳೂರು: ಬಿಜೆಪಿ ಜತೆ ಜೆಡಿಎಸ್ ವಿಲೀನ ವಿಚಾರ ತಾರಕಕ್ಕೇರಿದೆ. ಉಭಯ ಪಕ್ಷಗಳ ಮುಂಚೂಣಿ ನಾಯಕರು ವಿಲೀನವನ್ನು ಅಲ್ಲಗಳೆದಿದ್ದರೂ ರಾಜಕೀಯ ವಲಯದಲ್ಲಿ ಗೊಂದಲ ಮೂಡಿದೆ.
ಬಿಜೆಪಿ ಜತೆಗೆ ಜೆಡಿಎಸ್ ವಿಲೀನವಾಗುವುದಿಲ್ಲ ಎಂದು ಭಾನುವಾರ ಸಿಎಂ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸೋಮವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರೂ ಮುಖಂಡರು ನೀಡುತ್ತಿರುವ ತರಹೇವಾರಿ ಹೇಳಿಕೆಗಳು ಎರಡೂ ಪಕ್ಷಗಳನ್ನು ಮುಜುಗರಕ್ಕೀಡು ಮಾಡಿವೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ತಮ್ಮ ಪಕ್ಷದ ಸಚಿವರಾಗಲಿ, ಮುಖಂಡರಾಗಲಿ ವಿಲೀನ ಕುರಿತು ಮಾಧ್ಯಮಗಳಿಗೆ ಅನಗತ್ಯ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ. ಜೆಡಿಎಸ್ ಒಂದು ರಾಜಕೀಯ ಪಕ್ಷವಾಗಿದ್ದು, ಅವರು ತಮ್ಮ ಪಾಡಿಗೆ ತಾವು ಪಕ್ಷ ಸಂಘಟಿಸುತ್ತಿದ್ದಾರೆ. ಅನಗತ್ಯವಾಗಿ ಗೊಂದಲ ಉಂಟು ಮಾಡಬಾರದು ಎಂದು ಹೇಳಿದ್ದಾರೆ. ಜೆಡಿಎಸ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಟ್ಟಿರುವ ಪಕ್ಷ. ಆ ಪಕ್ಷಕ್ಕೆ ಎಚ್.ಕೆ.ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿದ್ದಾರೆ. ಜೆಡಿಎಸ್ ನಮ್ಮ ಪಕ್ಷದ ಜತೆ ವಿಲೀನವಾಗುತ್ತದೆ ಎಂದು ಹೇಳಿದರೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಮಾಡಿದ ಅವಮಾನ ಎಂದು ಹೇಳಿದರು. ವಿಧಾನ ಪರಿಷತ್ತಿನಲ್ಲಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಮ್ಮ ಪಕ್ಷದವರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಅದಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಇಷ್ಟು ಮಾತ್ರಕ್ಕೆ ಆ ಪಕ್ಷ ಬಿಜೆಪಿ ಜತೆ ವಿಲೀನವಾಗಲಿದೆ ಎಂಬುದು ಸರಿಯಲ್ಲ ಎಂದು ಹೇಳಿದ್ದರು.
ಸಿದ್ದರಾಮಯ್ಯ ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಬೇಕು ನಾನು ಅವರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಸಿದ್ದರಾಮಯ್ಯ ಇದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗುವಾಗ ನನ್ನ ಕೊಡುಗೆ ಅಪಾರವಾಗಿದೆ. ನನ್ನ ಆರ್ಥಿಕ ಶಕ್ತಿಯನ್ನು ಬಳಸಿ ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿದ್ದೇನೆ. ನನ್ನ ಬಗ್ಗೆ ಮಾತನಾಡುವಾಗ ಸಿದ್ದರಾಮಯ್ಯ ಎಚ್ಚರಿಕೆಯಿಂದಿರಬೇಕು. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
2023ಕ್ಕೆ ನಿಜವಾದ ರಾಜಕಾರಣ
ಕಾಂಗ್ರೆಸ್ನಿಂದ ಜೆಡಿಎಸ್ ಕತ್ತು ಹಿಸುಕುವ ಪ್ರಯತ್ನ ನಡೆಯುತ್ತಿದೆ. ಆ ಕಾರಣಕ್ಕಾಗಿ ಅನಿವಾರ್ಯವಾಗಿ ಕೆಲವು ನಿರ್ಧಾರಗಳನ್ನು ಮಾಡಿದ್ದೇವೆ. ನನ್ನ ನಿಜವಾದ ರಾಜಕಾರಣ ಶುರುವಾಗುವುದು 2023ಕ್ಕೆ. ಇದುವರೆಗಿನ ರಾಜಕಾರಣ ತಾತ್ಕಾಲಿಕವಾಗಿ ಮಾಡಿದ್ದು, 2023ಕ್ಕೆ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಜೆಡಿಎಸ್ ಅನ್ನು ಯಾವುದೇ ಪಕ್ಷದ ಜತೆ ವಿಲೀನ ಮಾಡುವುದಿಲ್ಲ. ನಾವು ಬದುಕಿರುವವರೆಗೂ ಜೆಡಿಎಸ್ ಬೇರೊಂದು ಪಕ್ಷದ ಜತೆ ವಿಲೀನವಾಗುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಇತ್ತೀಚೆಗೆ ರಾಜಕಾರಣದಲ್ಲಿ ಊಹಾಪೋಹಗಳನ್ನು ಗಮನಿಸಿದ್ದೇನೆ. ಪಕ್ಷದಿಂದ ಕಾಲು ಹೊರಗಿಟ್ಟವರು ಕೆಲವು ಹೇಳಿಕೆ ಕೊಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.