

ಕೆ.ಎಂ.ದೊಡ್ಡಿ: ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ 40 ವೀರ ಯೋಧರು ಹುತಾತ್ಮರಾಗಿ ಇಂದಿಗೆ (ಫೆ.14) ವರುಷ. ಹುತಾತ್ಮರಾದ 40 ಜನರ ಪೈಕಿ ಕೆ.ಎಂ.ದೊಡ್ಡಿಯ ಗುಡಿಗೆರೆ ಕಾಲನಿಯ ಎಚ್.ಗುರು ಕೂಡ ಒಬ್ಬರು.
2019ರ ಫೆ.14ರಂದು ಹುತಾತ್ಮರಾದ ಗುರು ಪಾರ್ಥೀವ ಶರೀರವನ್ನು ಫೆ.16ರಂದು ತಂದು ಸೇನಾ ಗೌರವದೊಂದಿಗೆ ಮಳವಳ್ಳಿ - ಮದ್ದೂರು ರಸ್ತೆಯ ಮೆಳ್ಳಹಳ್ಳಿಯ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಇಡೀ ರಾಜ್ಯದ ಜನರು ಅಂದು ಕಂಬನಿ ಮಿಡಿದು, ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸಿ, ಪಾರ್ಥಿವ ಶರೀರದ ಜತೆ ‘ಗುರು ಅಮರ್ ರಹೇ, ಭಾರತ್ ಮಾತಕೀ ಜೈ ಎನ್ನುವ ಘೋಷಣೆ ಮೊಳಗಿಸಿದ್ದರು. ಹಲವು ಸಚಿವರು, ಶಾಸಕರು, ಸ್ವಾಮೀಜಿಗಳು, ಚಲನಚಿತ್ರನಟ, ನಟಿಯರು ಅಗಮಿಸಿ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಆ ಸಂದರ್ಭದಲ್ಲಿ ಸಚಿವರಾಗಿದ್ದ ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಗುರು ಅಂತ್ಯಕ್ರಿಯೆ ನೆರವೇರಿಸಿದ ಸ್ಥಳದಲ್ಲಿ ಸ್ಮಾರಕ ಮಾಡುವುದಾಗಿ ಘೋಷಿಸಿದ್ದರು. ಇದೇ ವೇಳೆ ಸಂಸದೆ ಸುಮಲತಾ ಅಂಬರೀಷ್, ಸ್ಮಾರಕ ನಿರ್ಮಾಣಕ್ಕೆ 20 ಗುಂಟೆ ಜಮೀನು ನೀಡುವುದಾಗಿ ಘೋಷಿಸಿ, ಹುತಾತ್ಮ ಯೋಧನ ಪತ್ನಿ ಕಲಾವತಿ ಹೆಸರಿಗೆ 20 ಗುಂಟೆ ಜಮೀನನ್ನು ನೋಂದಣಿ ಮಾಡಿಸಿಕೊಟ್ಟಿದ್ದಾರೆ.
ಇಂದಿಗೂ ಮಳವಳ್ಳಿ ಮದ್ದೂರು ಮುಖ್ಯ ರಸ್ತೆಯಲ್ಲಿರುವ ಸಮಾಧಿ ಸ್ಥಳಕ್ಕೆ ನಿತ್ಯ ನೂರಾರು ದೇಶಪ್ರೇಮಿಗಳು ಆಗಮಿಸಿ ಸೆಲ್ಪಿ ತೆಗೆದುಕೊಂಡು ಹೋಗುತ್ತಾರೆ.
ಆದರೆ, ಸಮಾಧಿ ಇರುವ ಸ್ಥಳದಲ್ಲಿ ಕೊಂಚವೂ ಬದಲಾವಣೆ ಆಗಿಲ್ಲ. ಸಮಾಧಿ ಪಕ್ಕದಲ್ಲೇ ರೈತರು ಒಕ್ಕಣೆ ಮಾಡಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಆ ಜಾಗ ಕೆಸರು ಗದ್ದೆಯಂತಾಗಿರುತ್ತದೆ. ಮನಸ್ಸು ಮಾಡಿದ್ದರೆ ಗುರು ಕುಟುಂಬವೇ ತಮಗೆ ಬಂದ ಪರಿಹಾರದಲ್ಲಿ ಅಲ್ಲೊಂದು ಭವ್ಯವಾದ ಸ್ಮಾರಕ ನಿರ್ಮಾಣ ಮಾಡಬಹುದಿತ್ತು. ಆದರೆ, ಆ ಕುಟುಂಬ ಆ ನಿಟ್ಟಿನಲ್ಲಿ ಯೋಚನೆ ಮಾಡುವ ಬದಲಿಗೆ ಸರ್ಕಾರ ನಿರ್ಮಿಸಲಿ ಎಂದು ಕಾದು ಕುಳಿತಿದ್ದಾರೆ.
ಕುಟುಂಬದಲ್ಲಿ ಕಲಹ: ಗುರು ಹುತಾತ್ಮನಾದ ಬಳಿಕ ರಾಜ್ಯ, ದೇಶದ ಮೂಲೆ ಮೂಲೆಗಳಿಂದ ನೆರವು ಹರಿದು ಬಂದಿತು. ಮೂಲಗಳ ಪ್ರಕಾರ 12 ಕೋಟಿಗೂ ಹೆಚ್ಚು ನೆರವು ಕುಟುಂಬಕ್ಕೆ ಸಿಕ್ಕಿದೆ.
ನೆರವು ಹರಿದು ಬರುತ್ತಿದ್ದಂತೆ 11ನೇ ದಿನದ ತಿಥಿ ಕಾರ್ಯಕ್ಕೂ ಮೊದಲೇ ಕುಟುಂಬದಲ್ಲಿ ಕಲಹ ಆರಂಭವಾಗಿತ್ತು. ನೆರವಿನ ಹಣಕ್ಕಾಗಿ ಅತ್ತೆ ಸೊಸೆ ನಡುವೆ ಘರ್ಷಣೆಯಾಗುತ್ತಿರುವುದು ಗೊತ್ತಾಗಿ ಡಿ.ಸಿ.ತಮ್ಮಣ್ಣ ಸೇರಿ, ಪೊಲೀಸರು ಸೇರಿದಂತೆ ಹಲವರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದ್ದರು.
ತಿಂಗಳು ತುಂಬುತ್ತಿದ್ದಂತೆ ಗುರು ಪತ್ನಿ ಕಲಾವತಿ ತವರಿನತ್ತ ತೆರಳಿದ್ದರು. ನಂತರ ಸರ್ಕಾರ ಅವರಿಗೆ ನೌಕರಿ ಕಲ್ಪಿಸಿದ್ದು, ಬೆಂಗಳೂರಿನಲ್ಲಿದ್ದಾರೆ. ಈಗ ಅತ್ತೆ ಚಿಕ್ಕೊಳಮ್ಮ ಸುಮಲತಾ ಅಂಬರೀಷ್ ನೀಡಿರುವ ಜಮೀನಿನಲ್ಲಿ ತಮಗೂ 10 ಗುಂಟೆ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೆ.ಎಂ.ದೊಡ್ಡಿಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಕುಟುಂಬ ಕಲಹ ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಊಹಿಸಲಾಗುತ್ತಿಲ್ಲ.
ಇಷ್ಟೆಲ್ಲದರ ನಡುವೆ ಗುರು ತಂದೆ ಹೊನ್ನಯ್ಯ ಮಾತ್ರ ಇಸ್ತ್ರಿ ಮಾಡುವ ಕಾಯಕ ಮುಂದುವರಿಸಿಕೊಂಡು ಅದರಲ್ಲಿಯೇ ಜೀವನ ನಡೆಸುತ್ತಿದ್ದಾರೆ.