

ಖಾನಾಪುರ: ತಾಲೂಕಿನ ಕಣಕುಂಬಿ ಗ್ರಾಮದ ಹೊರವಲಯದಲ್ಲಿ ಬೆಳಗಾವಿ ಚೋರ್ಲಾ ಹೆದ್ದಾರಿ ಪಕ್ಕದಲ್ಲಿ ಮೇಯುತ್ತಿದ್ದ ಆಕಳ ಮೇಲೆ ಹುಲಿ ದಾಳಿ ನಡೆಸಿದ್ದರಿಂದ ಆಕಳು ಮೃತಪಟ್ಟ ಘಟನೆ ಸಂಭವಿಸಿದೆ.
ಆಕಳ ಕಳೇಬರ ಸಿಕ್ಕ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಮೂರು ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಕಣಕುಂಬಿ-ಚೋರ್ಲಾ ಮಾರ್ಗದ ಗೌಳಿವಾಡಾ ನಿವಾಸಿ ಬಾಬು ಬೋಡಕೆ ಎಂಬವವರಿಗೆ ಸೇರಿದ ಆಕಳನ್ನು ಅರಣ್ಯದೊಳಗೆ ಎಳೆದುಕೊಂಡು ಹೋದ ಹುಲಿ ಮೂರು ದಿನಗಳ ಕಾಲ ಭಕ್ಷಿಸಿದೆ. ಈ ಘಟನೆಯಿಂದ ಕಣಕುಂಬಿ ಮತ್ತು ಸುತ್ತಲಿನ ಭಾಗದ ಜನರಲ್ಲಿ ಭಯ ಆವರಿಸಿದೆ.
ಹುಲಿ ಅರಣ್ಯದಿಂದ ಜನನಿಬಿಡ ಪ್ರದೇಶಕ್ಕೆ ಬಂದು ದಾಳಿ ನಡೆಸಿದ ಘಟನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಹುಲಿಯಿಂದ ಜನ- ಜಾನುವಾರುಗಳಿಗೆ ರಕ್ಷಣೆ ನೀಡಬೇಕು ಎಂದು ಕಣಕುಂಬಿ ಹಾಗೂ ಸುತ್ತಲಿನ ಗ್ರಾಮದ ನಾಗರಿಕರು ಆಗ್ರಹಿಸಿದ್ದಾರೆ.
ಘಟನೆಯನ್ನು ಖಚಿತಪಡಿಸಿರುವ ಕಣಕುಂಬಿ ವಲಯ ಅರಣ್ಯಾಧಿಕಾರಿ ಕವಿತಾ ಈರನಟ್ಟಿ, ಹುಲಿ ದಾಳಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.