

ಶಿವರಾಜ ಎಂ. ಬೆಂಗಳೂರು
ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ನೀರುಣಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ಅಧಿಕಾರಿ ವರ್ಗದಿಂದಲೇ ಹಳ್ಳಹಿಡಿಯುತ್ತಿದೆ. ಹೌದು, ಇಂತಹದೊಂದು ಅನುಮಾನಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವೇ ಕಾರಣ ಎನ್ನಲಾಗಿದೆ. ಎತ್ತಿನಹೊಳೆ ಯೋಜನೆಯಡಿ ಜಮೀನು ಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ವಿಳಂಬ ಅನುಸರಿಸುತ್ತಿರುವ ಆರೋಪ ಕೇಳಿ ಬಂದಿದೆ. ಇದಕ್ಕೆ ಗ್ರಾಮಾಂತರ ಜಿಲ್ಲೆ ತ್ಯಾಮಗೊಂಡ್ಲು ಹೋಬಳಿಯ ಮರಳುಕುಂಟೆ ಗ್ರಾಪಂ ವ್ಯಾಪ್ತಿಯಲ್ಲಿ ಶೇಖರಣೆಯಾಗಿರುವ ಬೃಹತ್ ಪೈಪುಗಳೇ ಸಾಕ್ಷಿ ಎನ್ನುವಂತಾಗಿದೆ.
100 ಎಕರೆ ಸ್ವಾಧೀನ ಪ್ರಕ್ರಿಯೆ: ರೈತರ ಜಮೀನುಗಳಲ್ಲಿ ಪೈಪು ಅಳವಡಿಕೆ ಕಾಮಗಾರಿ ನಡೆಯಬೇಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಸುಮಾರು 100 ಎಕರೆಯಷ್ಟು ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಸಬೇಕಾಗಿದೆ. ಸ್ವಾಧೀನ ನಡೆಯದ ಪರಿಣಾಮ ಯೋಜನೆಗೆ ಗ್ರಹಣ ಹಿಡಿದಂತಾಗಿದೆ.
3 ವರ್ಷದ ಹಿಂದೆಯೇ ಯೋಜನೆಗೆ ಚಾಲನೆ ದೊರೆತಿದ್ದು, ಗುತ್ತಿಗೆ ಪಡೆದಿರುವ ಶಂಕರ್ ನಾರಾಯಣ್ ಕನ್ಸ್‌ಟ್ರಕ್ಷನ್ ಕಂಪನಿ ಲಿಮಿಟೆಡ್ ಬೃಹತ್ ಪೈಪುಗಳ ತಯಾರಿಕೆಯಲ್ಲಿ ನಿರತವಾಗಿದೆ. 2021ರ ಅಕ್ಟೋಬರ್ ವೇಳೆಗೆ ಈ ಯೋಜನೆಯಡಿ ನೀರು ಹರಿಯುವಂತೆ ಸರ್ಕಾರ ಗಡುವು ವಿಧಿಸಿದೆ. ಆದರೆ ಪೈಪುಗಳ ಅಳವಡಿಕೆಗೆ ಭೂ ಸ್ವಾಧೀನ ಪ್ರಕ್ರಿಯೆ ಅಡ್ಡಿಯಾದರೆ, ಇತ್ತ 4 ಮೀಟರ್ ವಿಸ್ತೀರ್ಣದ ಪೈಪುಗಳನ್ನು ಸಂಗ್ರಹಿಸಲು ಪರದಾಡುವಂತಾಗಿದೆ. ಈಗಾಗಲೇ ನೆಲಮಂಗಲ ತಾಲೂಕಿನ ಮರಳುಕುಂಟೆಯಲ್ಲಿ 40 ಎಕರೆ ವಿಸ್ತೀರ್ಣದಲ್ಲಿ ಪೈಪುಗಳ ತಯಾರಿಕೆ ಕೆಲಸ ನಡೆಯುತ್ತಿದೆ. ಭೂಮಿ ಸ್ವಾಧೀನ ಪ್ರಕ್ರಿಯೆ ಚುರುಕುಗೊಳ್ಳದಿದ್ದರೆ, ಪೈಪುಗಳ ಸಂಗ್ರಹಣೆಗೆ ಜಾಗ ಸಾಲದಾಗುತ್ತದೆ. ಬೇರೆ ಕಡೆ ಘಟಕ ಸ್ಥಳಾಂತರಿಸುವುದು ದುಬಾರಿಯಾಗಲಿದೆ ಎಂದು ಮರಳುಕುಂಟೆ ತಾಪಂ ಸದಸ್ಯ ನಾಗಭೂಷಣ್ ತಿಳಿಸಿದ್ದಾರೆ.
ನೋಟಿಸ್ ನೀಡಿಲ್ಲ 4 ಮೀಟರ್ ಸುತ್ತಳತೆಯ ಪೈಪ್‌ಗಳನ್ನು 20 ಅಡಿ ಆಳದಲ್ಲಿ ಅಳವಡಿಸಬೇಕು. ಈ ಪೈಪು ಹಾದು ಹೋಗುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು. ಇದಕ್ಕೆ ಸಾಕಷ್ಟು ನಿಯಮ ಪಾಲಿಸಬೇಕು. ಮುಖ್ಯವಾಗಿ ಪೈಪುಗಳು ಹಾದುಹೋಗುವ ಸ್ಥಳದ ಸರ್ವೇ ನಡೆಸಿ ಸಂಬಂಧಪಟ್ಟ ರೈತರಿಗೆ ನೋಟಿಸ್ ನೀಡಬೇಕು. ಆದರೆ ಇದುವರೆಗೆ ನೋಟಿಸ್ ನೀಡುವ ಪ್ರಕ್ರಿಯೆಗೆ ಅಧಿಕಾರಿಗಳು ಮುಂದಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ನೋಟಿಸ್ ನೀಡದೆ ರೈತರು ಭೂಸ್ವಾಧೀನಕ್ಕೆ ಸಹಕರಿಸುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಯೋಜನೆ ನಿಗದಿತ ಗಡುವಿನಲ್ಲಿ ಅನುಷ್ಠಾನ ಕಷ್ಟಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.
ಪರಿಹಾರ ಹೇಗೆ ಕೊಡುತ್ತಾರೆ! ಗ್ರಾಮಾಂತರ ಜಿಲ್ಲೆಯ ಕೆಲವೊಂದು ಕಡೆ ಸ್ಥಳೀಯ ಜನಪ್ರತಿನಿಧಿಗಳೇ ಮುಂದಾಳತ್ವ ವಹಿಸಿ ಸ್ಥಳೀಯ ರೈತರ ಮನವೊಲಿಸಿ ಭೂಮಿ ಸ್ವಾಧೀನಕ್ಕೆ ಬೆವರು ಹರಿಸುತ್ತಿದ್ದಾರೆ. ಕೆಲವು ರೈತರು ಸ್ಪಂದಿಸುತ್ತಿದ್ದರೆ, ಕೆಲವೊಬ್ಬರು ಇದಕ್ಕೆ ಸಮ್ಮತಿಸುತ್ತಿಲ್ಲ. ನಿಯಮದ ಪ್ರಕಾರ ನೋಟಿಸ್ ಬರಬೇಕು. ಕೇವಲ ಬಾಯಿ ಮಾತಿಗೆ ಒಪ್ಪುವುದಿಲ್ಲ. ಮುಂದೆ ಸರ್ಕಾರದಿಂದ ಬರುವ ಪರಿಹಾರ ಸಿಗುವುದು ಅನುಮಾನ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಜೆಟ್ ೋಷಣೆ ನಿರೀಕ್ಷೆ: ರಾಜ್ಯ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಎತ್ತಿನಹೊಳೆ ಯೋಜನೆಗೆ 1500 ಕೋಟಿ.ರೂ.ೋಷಿಸಿ ಯೋಜನೆಗೆ ವಿಶೇಷ ಒತ್ತು ನೀಡಿದ್ದಾರೆ. ಆದರೆ ಅಧಿಕಾರಿ ವರ್ಗ ಕರ್ತವ್ಯ ನಿರ್ವಹಿಸದಿದ್ದರೆ ಯೋಜನೆ ಚುರುಕು ಪಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.
ನಮ್ಮ ಭಾಗದ ರೈತ ಮನವೊಲಿಸಿ ಭೂಮಿ ಸ್ವಾಧೀನಕ್ಕೆ ಕಷ್ಟಪಡುತ್ತಿದ್ದೇವೆ. ಕೆಲವರು ನಮ್ಮ ಮೇಲೆ ನಂಬಿಕೆ ಇಟ್ಟು ಒಪ್ಪಿಗೆ ನೀಡುತ್ತಿದ್ದಾರೆ. ಕೆಲವರು ಸರ್ಕಾರದ ಪರಿಹಾರ ಹಣದ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ನೋಟಿಸ್ ನೀಡಿ ಕರ್ತವ್ಯ ನಿರ್ವಹಿಸದಿದ್ದರೆ ಯೋಜನೆ ಸಾಕಾರಗೊಳ್ಳುವುದಾದರೂ ಹೇಗೆ? ನಾಗಭೂಷಣ್, ತಾಪಂ ಸದಸ್ಯ ಮರಳುಕುಂಟೆ ಗ್ರಾಪಂ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಜಿಲ್ಲೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ವಿಶೇಷ ಸಭೆ ಕರೆದು ಈ ಬಗ್ಗೆ ಸೂಚನೆ ನೀಡಲಾಗುವುದು. ಭೂಸ್ವಾಧೀನವಾದ ರೈತರು ಆತಂಕಪಡಬೇಕಿಲ್ಲ. ಪರಿಹಾರ ಸಮರ್ಪಕವಾಗಿ ವಿತರಣೆಯಾಗಲಿದೆ. ಜಗದೀಶ್ ಕೆ. ನಾಯಕ್, ಅಪರ ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ