

ಬೇಲೂರು : ಬೇಲೂರು ಚನ್ನಕೇಶವ ದೇಗುಲ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಹಿನ್ನೆಲೆಯಲ್ಲಿ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಿಕ್ಕಾಗಿ ಯಾತ್ರಿ ನಿವಾಸವನ್ನು ಪುನರಾರಂಭ ಮಾಡಲಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
23 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಯಾತ್ರಿ ನಿವಾಸ ಪುನಾರಾರಂಭ ಸಂದರ್ಭ ಪೂಜಾ ಕಾರ್ಯ ನೆರವೇರಿಸಿ ಅವರು ಮಾತನಾಡಿದರು. ಕೆಲ ದಿನಗಳ ಹಿಂದೆ ಹಾಸನ ಜಿಲ್ಲಾಧಿಕಾರಿ ದೇಗುಲದ ಯಾತ್ರಿ ನಿವಾಸಕ್ಕೆ ಭೇಟಿ ನೀಡಿದ್ದರು. ಇಲ್ಲಿದ್ದ ಸಮಸ್ಯೆಗಳನ್ನು ಪರಿಶೀಲಿಸಿ ನವೀಕರಣಕ್ಕೆ ಸೂಚಿಸಿದ್ದರು. ಯಾತ್ರಿ ನಿವಾಸದ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸೇವೆಗೆ ಚಾಲನೆ ದೊರಕಿರಲಿಲ್ಲ. ಇಂದಿನಿಂದ ಯಾತ್ರಿ ನಿವಾಸ ಪ್ರವಾಸಿಗರ ಸೇವೆಗೆ ಲಭ್ಯವಿದೆ ಎಂದರು. ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ಯಾತ್ರಿ ನಿವಾಸದ ಹೆಚ್ಚುವರಿ ಕಾಮಗಾರಿಗಳು ಪೂರ್ಣಗೊಂಡಿದ್ದು, ದೂರದ ಊರಿನ ಭಕ್ತರಿಗೆ ಅನುಕೂಲವಾಗಲಿದೆ ಎಂದರು. ತಹಸೀಲ್ದಾರ್ ಎಂ.ಮಮತಾ, ದೇಗುಲ ಇಒ ಯೋಗೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಜಯಲಕ್ಷ್ಮೀ, ಸುಧಾ, ಅರ್ಚಕ ಶ್ರೀನಿವಾಸ ಭಟ್ಟರ್, ಭೂಸೇನಾ ನಿಗಮದ ಇಂಜಿನಿಯರ್ ಉಲ್ಲಾಸ್, ಮುಖಂಡ ಸಿ.ಎಸ್.ಪ್ರಕಾಶ್ ಇತರರು ಇದ್ದರು.