ಬಿಜೆಪಿಯಿಂದ ಯತ್ನಾಳ ಉಚ್ಚಾಟನೆ, ಪಂಚಮಸಾಲಿ ಸಮಾಜದ ದುರ್ಬಳಕೆ ಸಲ್ಲ, ಮರಳಿ ಪಕ್ಷಕ್ಕೆ ಬಂದರೆ ಅವಷ್ಟು ನಿರ್ಲಜ್ಜರಾರೂ ಇಲ್ಲ...!

SURESH BIRADAR-GOPAL PRESS MEET
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ ಹಾಗೂ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಬಸನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟನೆ ಮಾಡಿ ಆದೇಶ ಹೊರಡಿಸಿರುವುದು ದುರಾದೃಷ್ಠಕರ. ಆದರೆ, ಯತ್ನಾಳರ ವಿಚಾರದಲ್ಲಿ ಪಂಚಮಸಾಲಿ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ ತಿಳಿಸಿದರು.

ಯತ್ನಾಳರನ್ನು ಉಚ್ಚಾಟನೆಗೊಳಿಸುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಲಿಂಗಾಯತ ಹಾಗೂ ಪಂಚಮಸಾಲಿ ವಿರೋಧಿ ಎಂಬಂತೆ ಬಿಂಬಿಸುತ್ತಿರುವುದು, ಪಂಚಮಸಾಲಿ ಸಮಾಜದ ಹೆಸರು ಹೇಳಿಕೊಂಡು ಹೋರಾಟ ನಡೆಸುವುದು ಸರಿಯಲ್ಲ. ಬಿಜೆಪಿಯಲ್ಲಿ ಯತ್ನಾಳರೊಬ್ಬರೇ ಪಂಚಮಸಾಲಿ ನಾಯಕರಿಲ್ಲ. ಅನೇಕ ಪಂಚಮಸಾಲಿ ಸಮಾಜದ ನಾಯಕರಿದ್ದು ಅವರಿಗೆ ಇದರಿಂದ ಹಾನಿಯಾಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಪಂಚಮಸಾಲಿ ಸಮಾಜಕ್ಕೂ ಯತ್ನಾಳರ ಉಚ್ಚಾಟನೆಗೂ ಯಾವುದೇ ಸಂಬಂಧವಿಲ್ಲ. ಯತ್ನಾಳರ ಹಿಂದೆ ಇಡೀ ಪಂಚಮಸಾಲಿ ಸಮಾಜವೂ ಇಲ್ಲ. ಪಂಚಮಸಾಲಿ ಬ್ಯಾನರ್ ಅಡಿ ನಡೆಸಿದ ಹೋರಾಟದಲ್ಲಿ ಎಷ್ಟು ಜನ ಸಮಾಜದವರು ಇದ್ದರು? ಸಿದ್ಧಸಿರಿ ಸಂಸ್ಥೆಯ ಸಿಬ್ಬಂದಿಯನ್ನು ಕರೆತಂದು ಹೋರಾಟ ನಡೆಸಿ ಅದನ್ನೇ ಪಂಚಮಸಾಲಿ ಸಮಾಜದ ಹೋರಾಟ ಎಂದು ಬಿಂಬಿಸುವುದು ಸರಿಯಲ್ಲ. ಹೀಗೆ ಹೋರಾಟ ಮಾಡುವ ಬದಲು ಯತ್ನಾಳರು ಪಂಚಮಸಾಲಿ ಸಮಾಜದ ಎಷ್ಟು ಹಿರಿಯ ನಾಯಕರ ಅಭಿಪ್ರಾಯ ಪಡೆದು ರಾಜಕೀಯ ನಿರ್ಧಾರ ತೆಗೆದುಕೊಂಡಿದ್ದಾರೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಈಗ ಹೋರಾಟ ಮಾಡುವವರು ಯತ್ನಾಳರಿಗೆ ಸೂಕ್ತ ಸಲಹೆ ನೀಡಿದ್ದರೆ ಈ ಪ್ರಮೇಯವೇ ಬರುತ್ತಿರಲಿಲ್ಲ ಎಂದರು.

ಆತ್ಮಾವಲೋಕನ ಮಾಡಿಕೊಳ್ಳಿ

ಪ್ರತಿಭಟನೆ ಎಲ್ಲರ ಹಕ್ಕು. ಆದರೆ ಹಾಗೆ ಪ್ರತಿಭಟನೆ ಮಾಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ. ಯತ್ನಾಳರಿಗೆ ಪಕ್ಷ ಸಾಕಷ್ಟು ಅವಕಾಶ ನೀಡಿತು. ತಪ್ಪು ತಿದ್ದಿಕೊಳ್ಳಲು ಸಮಯ ನೀಡಿತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ಮೂವತ್ತು ಕ್ಷೇತ್ರದ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಹೋದಲ್ಲೆಲ್ಲ ಪಕ್ಷ ಸೋಲು ಅನುಭವಿಸಿತು. ಜಿಲ್ಲೆಯಲ್ಲಿ ಅವರದ್ದೇ ವಿಧಾನ ಸಭೆ ಕ್ಷೇತ್ರದಲ್ಲಿ ಮತ ಪ್ರಮಾಣ ಕುಂಠಿತವಾಯಿತು. ಹೀಗಾಗಿ ಅವರೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂದರು.

ಎಲ್ಲದಕ್ಕೂ ಇತಿ ಮಿತಿ ಇದೆ. ಆದರೆ ಇತಿ ಮಿತಿ ದಾಟಿದ ಬಳಿಕ ಪಕ್ಷ ಇಂಥ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು. ಪಕ್ಷದ ಈ ಕ್ರಮದಿಂದ ಕೆಲವರು ಸಂಭ್ರಮಿಸಿದರೆ ಇನ್ನೂ ಕೆಲವರು ಪ್ರತಿಭಟಿಸಿದರು. ಪಂಚಮಸಾಲಿ ಸಮಾಜ ವಿರೋಧ ಮಾಡಲಿದೆ ಎಂಬ ಕೂಗು ಸಹ ಕೇಳಿ ಬಂತು. ಇದು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಲಿದೆ ಎಂದರು.

ಬಿಎಸ್‌ವೈ ಕುಟುಂಬ ಅವಹೇಳನ ಸಲ್ಲ

ಬಿಜೆಪಿ ಪಕ್ಷ ಕಟ್ಟಲು ಯಡಿಯೂರಪ್ಪ ಅವರು ತಮ್ಮ ಜೀವನವನ್ನೇ ಸಮರ್ಪಣೆ ಮಾಡಿಕೊಂಡಿದ್ದಾರೆ. ಅವರ ಕ್ಯಾಬಿನೆಟ್‌ನಲ್ಲಿ ಕನಿಷ್ಠ ಮೂರು ಜನರಾದರೂ ಪಂಚಮಸಾಲಿ ಸಮಾಜದ ಮಂತ್ರಿಗಳಿರುತ್ತಿದ್ದರು. ಹೀಗಾಗಿ ಅವರಿಂದ ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾಗಿಲ್ಲ. ಶರಣಬಸಪ್ಪ ಅಪ್ಪ ಪಂಚಮಸಾಲಿ ಸಮುದಾಯದವರು. ಅವರ ಕುಟುಂಬದೊಂದಿಗೆ ವೈವಾಹಿಕ ಸಂಬಂಧವೂ ಬೆಳೆಸಿದ್ದಾರೆ. ಹೀಗಿರುವಾಗ ಅವರವನ್ನು ಅವಹೇಳನ ಮಾಡುವುದು ಸಮಾಜಕ್ಕೆ ಕಳಂಕ ತಂದಂತೆ ಎಂದರು.

ಯಾವುದೇ ಒಂದು ಪಕ್ಷ ಉಚ್ಚಾಟನೆ ಮಾಡಿದಾಗ ಅದನ್ನು ಸಮಾಜಕ್ಕೆ ಅನ್ವಯಿಸುವುದು ಸರಿಯಲ್ಲ. ರಾಜಕಾರಣ ಮತ್ತು ಸಮಾಜ ಎರಡೂ ಬೇರೆ ಬೇರೆ. ಒಂದು ಪಕ್ಷದಲ್ಲಿ ಎಲ್ಲ ಸಮಾಜದವರೂ ಇರುತ್ತಾರೆ. ಹೀಗಾಗಿ ಕೂಡಲ ಸಂಗಮ ಸ್ವಾಮೀಜಿಯಂಥವರು ಸಾಮಾಜವನ್ನು ಬಳಸಿಕೊಳ್ಳುವುದು ಸರಿಯಲ್ಲ. ಕೇವಲ ಪಂಚಮಸಾಲಿ ಸಮಾಜವನ್ನು ಮುನ್ನೆಲೆಗೆ ತರುತ್ತಿರುವುದು ಸಮಾಜದ ಇನ್ನುಳಿದ ನಾಯಕರಿಗೆ ಮುಜುಗರ ತರುತ್ತಿದೆ ಎಂದರು.

ಯತ್ನಾಳರ ಉಚ್ಚಾಟನೆಯಿಂದ ಯಾರೂ ಪಕ್ಷ ತ್ಯಜಿಸುತ್ತಿಲ್ಲ. ಈವರೆಗೆ ಎಷ್ಟು ರಾಜೀನಾಮೆ ಪತ್ರ ಬಂದಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕೇಳಿದಾಗ ಕೇವಲ ಎರಡು ರಾಜೀನಾಮೆ ಪತ್ರ ಬಂದಿವೆ ಎಂದು ತಿಳಿಸಿದ್ದಾರೆ. ಹೀಗಾಗಿ ತಪ್ಪು ಸಂದೇಶ ರವಾನಿಸುವುದು, ಹೋರಾಟದ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದರು.

ಯತ್ನಾಳ ಮರಳಿ ಬಂದರೆ ನಿರ್ಲಜ್ಜರು

ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಯತ್ನಾಳರ ವಿಚಾರದಲ್ಲಿ ತಡವಾಗಿಯಾದರೂ ಬಿಜೆಪಿ ಹೈಕಮಾಂಡ್ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದೆ. ಇದರಿಂದ ಕಾರ್ಯಕರ್ತರಿಗೆ ಸಮಾಧಾನವಾಗಿದೆ. ಬಿಜೆಪಿ ಶಿಸ್ತಿನ ಪಕ್ಷ. ಕೇಂದ್ರ ನಾಯಕರು ಯತ್ನಾಳರಿಗೆ ಎರಡು ವರ್ಷಗಳಿಂದ ಅವಕಾಶ ನೀಡಿದರೂ ಯತ್ನಾಳ ಸುಧಾರಿಸಲಿಲ್ಲ. ಅವರ ಬೆಂಬಲಿಗರಾದರೂ ಉತ್ತಮ ಸಲಹೆ ಕೊಡಬೇಕಿತ್ತು. ಪಕ್ಷಕ್ಕೆ ಹಾನಿಯಾಗುತ್ತಿದ್ದು ಸುಮ್ಮನಿರಿ ಎಂದು ಹೇಳಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ. ಇಷ್ಟೆಲ್ಲಾ ಆದರೂ ಯತ್ನಾಳರು ಮರಳಿ ಬಿಜೆಪಿ ಸೇರುವುದಾಗಲಿ, ಅವರ ಬೆಂಬಲಿಗರು ಪಕ್ಷಕ್ಕೆ ತೆಗೆದುಕೊಳ್ಳಿ ಎಂದು ಹೇಳುವುದಾಗಲಿ ಮಾಡಿದರೆ ಹಾಗೊಂದು ವೇಳೆ ಯತ್ನಾಳ ಮರಳಿ ಬಿಜೆಪಿಗೆ ಬಂದರೆ ಅವರಷ್ಟು ನಿರ್ಲಜ್ಜರು ಬೇರೆ ಯಾರೂ ಇಲ್ಲವೆಂದು ಖಾರವಾಗಿ ಪ್ರತಿಕ್ರಿಯಿಸಿದರು.

ಯತ್ನಾಳರಿಗೆ ಪಕ್ಷ, ಹಿಂದುತ್ವದ ಬಗ್ಗೆ ಕಾಳಜಿ ಇದ್ದರೆ ಇಷ್ಟೆಲ್ಲಾ ಹಾನಿ ಮಾಡುತ್ತಿರಲಿಲ್ಲ. ಆದರೆ ಯತ್ನಾಳರ ಹಿಂದುತ್ವ ಕೇವಲ ಭಾಷಣ ಮತ್ತು ಅಧಿಕಾರಕ್ಕೆ ಮಾತ್ರ ಸೀಮಿತ. ಇಂದು ಯತ್ನಾಳ ತಾವು ಮಾಡಿದ್ದನ್ನೇ ತಾವು ಉಂಡಿದ್ದಾರೆ. 150 ಸ್ಥಾನ ಗೆಲ್ಲುವ ತಾಕತ್ತಿದೆ ಎನ್ನುವ ಯತ್ನಾಳರು ಪ್ರತಿಭಟನೆ ನಡೆಸೋದೇಕೆ? ಪಕ್ಷಕ್ಕೆ ಮರಳಿ ತೆಗೆದುಕೊಳ್ಳಿ ಎನ್ನುವುದೇಕೆ? ಸಿದ್ದಸಿರಿ ಸಿಬ್ಬಂದಿ ಕರೆಯಿಸಿ ಪ್ರತಿಭಟನೆ ಮಾಡಿಸುವುದೇಕೆ? ನಿಮ್ಮಲ್ಲಿ ಗಟ್ಟಿ ಕಾರ್ಯಕರ್ತರಿಲ್ಲ. ಗಟ್ಟಿ ಕಾರ್ಯಕರ್ತರು ಪಕ್ಷದಲ್ಲಿದ್ದಾರೆ. ಅವರೆಲ್ಲೂ ಹೋಗಲ್ಲ. ಭ್ರಮೆಯಿಂದ ಹೊರಬನ್ನಿ. ಯತ್ನಾಳ ಪಕ್ಷದಲ್ಲಿ ಇರದೇ ಇದ್ದಾಗಲೇ ಜಿಲ್ಲೆಯಲ್ಲಿ ಐದು ಶಾಸಕರಿದ್ದರು. ಇವರು ಪಕ್ಷಕ್ಕೆ ಬಂದ ಮೇಲೆ ಇವರೊಬ್ಬರೇ ಶಾಸಕರಾಗಿ ಉಳಿದಿದ್ದಾರೆ. ಹೀಗಾಗಿ ಇವರಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಇವರ ಅವಶ್ಯಕತೆ ಪಕ್ಷಕ್ಕಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net