ಪೀರಾ ಜತೆ ಯತ್ನಾಳ ವ್ಯವಹಾರಿಕ ಸಂಬಂಧ

11 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೌಲ್ವಿ ತನ್ವೀರ್ ಪೀರಾ ಅವರ ಸೋದರ ಮಾವನೊಂದಿಗೆ ಶಾಸಕ ಬಸನಗೌಡ ಯತ್ನಾಳ ಪಾಟೀಲ ವ್ಯವಹಾರಿಕವಾಗಿ ಸಂಬಂಧ ಹೊಂದಿದ್ದಾರೆ ಎಂದು ಧಾರವಾಡ ಅಂಜುಮನ್ ಇಸ್ಲಾಂ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಮೇತ ಮಾಹಿತಿ ನೀಡಿದ ಅವರು, ಮೌಲ್ವಿ ಪೀರಾ ಜತೆಗೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ. ಈ ಬಗ್ಗೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯತ್ನಾಳ ಟ್ವೀಟ್ ಮಾಡಿದ್ದಾರೆ. ಆದರೆ, ವಿಜಯಪುರ ಪಟ್ಟಣದ ವಾರ್ಡ್ ನಂ. 3ರ ಸಿಟಿಎಸ್ ನಂ. 1644/3ರಲ್ಲಿ 594 ಚದರ ಯಾರ್ಡ್ ಜಾಗದಲ್ಲಿ ಹೋಟೆಲ್ ಇದೆ. ಎಂ.ಎಂ. ಪೀರಜಾದೆ ಹಾಗೂ ಶಾಸಕ ಯತ್ನಾಳ ಹೆಸರಿನಲ್ಲಿ ಈ ಆಸ್ತಿ ಇದೆ. ಮೌಲ್ವಿ ಪೀರಾ ತಾಯಿಯ ಸಹೋದರ ಪೀರಜಾದೆ. ಇಬ್ಬರೂ ಒಪ್ಪಂದ ಮಾಡಿಕೊಂಡು ಹೋಟೆಲ್ ವ್ಯವಹಾರ ನಡೆಸುತ್ತಿದ್ದಾರೆ ಎಂದರು.
ಒಂದು ವೇಳೆ ಮೌಲ್ವಿ ತನ್ವೀರ ಪೀರಾ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದರೆ, ಇಂತಹವರ ಜತೆಗೆ ಯತ್ನಾಳ ಒಪ್ಪಂದ ಮಾಡಿಕೊಂಡು ವ್ಯವಹಾರ ಮಾಡುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಇಸ್ಮಾಯಿಲ್, ಇದೇ ಕಾರಣಕ್ಕೆ ಯತ್ನಾಳ ಅವರಿಗೆ ತಲೆ ಕೆಟ್ಟಿದ್ದು ಡಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಎಂದು ಹೇಳಿದ್ದೇವೆ ಎಂದರು.
ಪಕ್ಷದಲ್ಲಿ ಅಸಹಾಯಕರಾಗಿರುವ ಯತ್ನಾಳ, ತಮ್ಮ ಅಸ್ತಿತ್ವ ತೋರ್ಪಡಿಸಲು ಮನ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಸ್ತುತ ಅಧಿವೇಶನದಲ್ಲಿ ಸುಖಾಸುಮ್ಮನೆ ಸಮಯ ಹಾಳು ಮಾಡುವ ಬದಲು ಉತ್ತರ ಕರ್ನಾಟಕ ಸೇರಿ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಒಳ್ಳೆಯದು. ಈ ಕುರಿತು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net