ಸಿಎಂ ಸಿದ್ದರಾಮಯ್ಯಗೆ ಯತ್ನಾಳ ಸಲಹೆ, ಡಿಕೆಶಿ ಬೆಂಬಲಿಗರನ್ನು ಸೋಲಿಸದಿದ್ದರೆ ಕುರ್ಚಿ ಕಳೆದುಕೊಳ್ಳುವುದು ಗ್ಯಾರಂಟಿ !

yatnal vs state government
Published on

ವಿಜಯಪುರ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಡಿ.ಕೆ. ಶಿವಕುಮಾರ ಈಗಿನಿಂತಲೇ ತಯಾರಿ ನಡೆಸಿದ್ದು ಅದಕ್ಕಾಗಿ ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಂಡು ಡಿಕೆಶಿ ಪರ ಇರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಲೋಕಸಮರದಲ್ಲಿ ಸೋಲಿಸಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತನ್ನ ಪರ ಇರುವ ಅಭ್ಯರ್ಥಿಗಳನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಆ ಮೂಲಕ ಮುಖ್ಯಮಂತ್ರಿಯಾಗುವ ಕನಸು ಡಿಕೆಶಿ ಕಾಣುತ್ತಿದ್ದಾರೆ. ಉದಾಹರಣೆಗೆ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯ ತಂದೆ ಡಿ.ಕೆ.ಶಿವಕುಮಾರ ಬೆಂಬಲಿಗರಿದ್ದು, ಅವರ ಪುತ್ರಿಯನ್ನು ಗೆಲ್ಲಿಸುವ ವಿಚಾರವಾಗಿ ಸ್ವಾಮೀಜಿಯೊಬ್ಬರ ಜೊತೆಗೆ ಮಾತುಕತೆ ನಡೆಸಿರುವ ಮಾಹಿತಿ ಇದೆ. ನೀವೆಲ್ಲ ಸಹಕಾರ ನೀಡಿದರೆ ಲೋಕಸಭೆ ಚುನಾವಣೆ ಬಳಿಕ ನಾನೇ ಸಿಎಂ ಆಗುತ್ತೇನೆ, ಏನಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಲೋಕಸಭೆ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆಂಬುದು ಗೊತ್ತಾಗಿದೆ ಎಂದು ಬುಧವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

ಬಾಗಲಕೋಟೆ ಲೋಕಸಭೆ ಅಭ್ಯರ್ಥಿ ತಂದೆ ಡಿ.ಕೆ. ಶಿವಕುಮಾರ ಬೆಂಬಲಿಗ. ಅವರು ಸಿದ್ದರಾಮಯ್ಯ ಅವರ ವಿರೋಧವಿದ್ದಾರೆ. ಅದನ್ನು ಬಳಸಿಕೊಳ್ಳಲು ಡಿ.ಕೆ. ಶಿವಕುಮಾರ ಮುಂದಾಗಿದ್ದಾರೆ. ಅದಕ್ಕಾಗಿ ಲಿಂಗಾಯತ-ಒಕ್ಕಲಿಗ ಒಂದು ಎಂಬ ಸಂದೇಶ ಕೊಡಲು ಮುಂದಾಗಿದ್ದಾರೆ ಎಂದರು.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಒಡೆದು ಹೊಸ ಸರ್ಕಾರ ರಚನೆಯಾಗಲಿದೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳುವುದಿಷ್ಟೆ- ಡಿಕೆಶಿ ಪರ ಇರುವ ಅಭ್ಯರ್ಥಿಗಳನ್ನು ಸೋಲಿಸದೇ ಹೋದರೆ ನಿಮ್ಮ ಸಿಎಂ ಸ್ಥಾನ ಹೋಗುವುದು ಗ್ಯಾರಂಟಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net