

ಶಿರಸಿ: ಹಿಂದು ಫೈರ್ ಬ್ರ್ಯಾಂಡ್, ಶಾಸಕ ಬಸನಗೌಡ ಯತ್ನಾಳ್ ನೇರ ಮಾತನ್ನಾಡುವವರು. ಅವರ ಮಾತುಗಳಿಂದ ಬಿಜೆಪಿಯ ಪ್ರಮುಖರಿಗೆ ಮುಜುಗರ ಆಗಿರಬಹುದು. ಆದರೆ, ಅವರನ್ನು ಪಕ್ಷದಿಂದ ಉಚ್ಚಾಟಿಸಬಾರದಿತ್ತು. ಈಗಲಾದರೂ ಉಚ್ಚಾಟನೆಯನ್ನು ಬಿಜೆಪಿ ನಾಯಕರು ಮರುಪರಿಶೀಲಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ನಗರಕ್ಕೆ ಭಾನುವಾರ ಆಗಮಿಸಿದ್ದ ಅವರು, ಮಾಧ್ಯಮದೊಂದಿಗೆ ಮಾತನಾಡಿ, ಯತ್ನಾಳ್ ಹಿಂದುತ್ವದ ಕುರಿತಂತೆ ನೇರ ನುಡಿ ಸ್ವಭಾವದವರು. ಯತ್ನಾಳ್ ಅವರ ನೇರ ನುಡಿ ಪಕ್ಷಕ್ಕೆ ಮುಜುಗರ ಆಗಿರಬಹುದು. ಆದರೆ, ವಾಸ್ತವಿಕತೆಯನ್ನೂ ಅವರು ತಿಳಿದುಕೊಂಡು ಹಿಂದುತ್ವದ ಪರವಾಗಿ ನಿಲ್ಲುವವರನ್ನು ಪಕ್ಷದಲ್ಲಿ ಗಟ್ಟಿಗೊಳಿಸಬೇಕು. ಯತ್ನಾಳ್ ಉಚ್ಚಾಟನೆ ಬಿಜೆಪಿಯ ಆಂತರಿಕ ವಿಚಾರ. ಆದರೆ, ಬಿಜೆಪಿ ಪಕ್ಷ ಸಂಘಟನೆಯಲ್ಲಿ, ಪಕ್ಷದ ಬೆಳವಣಿಗೆಯಲ್ಲಿ ನನ್ನದೂ ಪಾತ್ರ ಇದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬೀಜವೇ ಇರದ ದಿನಗಳಲ್ಲಿ ನಾವೆಲ್ಲ ಶ್ರಮಿಸಿದ ಕಾರಣ 32 ಶಾಸಕರು ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಹಿಂದುತ್ವವೇ ಕಾರಣ ಎಂದರು.
ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲೂ ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ಮುಸ್ಲಿಂ ತುಷ್ಠೀಕರಣ ಕಾಂಗ್ರೆಸ್ನ ಒಂದು ಭಾಗ. ಅದೇನೂ ಹೊಸ ವಿಷಯವಲ್ಲ. ಆದರೆ, ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಿರುವುದು ಸಂವಿಧಾನ ವಿರೋಧಿ. ಅದು ಕಾನೂನಾತ್ಮಕವಾಗಿ ನಿಲ್ಲುವುದಿಲ್ಲ ಎಂದು ತಿಳಿದಿದ್ದರೂ ಕಾಂಗ್ರೆಸ್ ಜಾರಿಗೆ ತಂದಿದೆ. ಇದೊಂದು ನಾಟಕೀಯ ನಡೆಯಾಗಿದೆ ಎಂದರು.
ಬಿಜೆಪಿಯವರ ಸೌಗತ್ ಎ ಮೋದಿ ಹೆಸರಿನಲ್ಲಿ ರಂಜಾನ್ಗಾಗಿ 32 ಲಕ್ಷ ಕಿಟ್ ಕೊಟ್ಟಿರುವುದನ್ನು ನಾನು ವಿರೋಧಿಸುತ್ತೇನೆ. ಈ ಹಿಂದೆ ಅಜ್ಮೀರ್ ದರ್ಗಾಕ್ಕೂ ಪ್ರಧಾನಿ ಮೋದಿ ಚಾದರ್ ಕಳಿಸಿದ್ದರು. ಅದನ್ನೂ ಖಂಡಿಸುತ್ತೇವೆ. ಬಿಜೆಪಿಯವರೂ ತುಷ್ಠೀಕರಣದತ್ತ ವಾಲುತ್ತಿದೆ ಎಂದು ಅನಿಸುತ್ತಿದೆ. ಬಿಜೆಪಿಯವರ ಯೋಜನೆ, ಯೋಚನೆ ಏನಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಹಿಂದುತ್ವವಾದಿಗಳನ್ನು ಕಡೆಗಣಿಸುತ್ತಿರುವುದೂ ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಲಿದೆ. ಇದನ್ನು ಬಿಜೆಪಿಯ ಕೇಂದ್ರ ಮತ್ತು ರಾಜ್ಯದವರು ಅರ್ಥ ಮಾಡಿಕೊಳ್ಳಬೇಕು. ಲೂಟಿಕೋರರು, ಭ್ರಷ್ಟರನ್ನು ಶುದ್ಧ ಬಿಜೆಪಿಯ ಒಳಗಡೆ ಬಿಟ್ಟುಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬಳಿಕ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮನೆಯಲ್ಲಿ ಲವ್ ಜಿಹಾದ್ ಕುರಿತಾಗಿ ಶ್ರೀರಾಮ ಸೇನೆಯಿಂದ ಪ್ರಕಟ ಮಾಡಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.