

ವಿಜಯಪುರ: ಬಿಜೆಪಿ ರಾಜ್ಯ ಟಕದ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅರ್ಹರಲ್ಲ ಎಂಬ ಮಾಜಿ ಸಚಿವ ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆ ಸರಿಯಾಗಿದ್ದು, ನಾನು ಕೂಡ ಆ ಹೇಳಿಕೆ ಪರವಾಗಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯನಾಗಲು ಅರ್ಹರಲ್ಲ.
ಅವರಿಂದಾಗಿಯೇ ಪಕ್ಷದ ಕಾರ್ಯದರ್ಶಿ ಸ್ಥಾನಕ್ಕೆ ಸುನೀಲಕುಮಾರ ರಾಜೀನಾಮೆ ನೀಡಬೇಕಾಗಿ ಬಂದಿದೆ. ವಿಜಯೇಂದ್ರನ ನಾಯಕತ್ವ ನಾವೂ ಒಪ್ಪುವುದಿಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ನಾವು ಯಾರಿಗೂ ಹೆದರಲ್ಲ. ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡ್ಡಿಯೂರಪ್ಪ ಜೈಲಿಗೆ ಹೋಗಬೇಕಾಯಿತು ಎಂದು ಆರೋಪಿಸಿದ ಯತ್ನಾಳ, ಬಿಎಸ್ವೈ ತಮ್ಮ ಮಗನ ಮೇಲಿರುವ ವ್ಯಾಮೋಹ ಕಡಿಮೆ ಮಾಡಲಿ ಎಂದು ಕುಟುಕಿದರು.
ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ, ಯಡ್ಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ? ಬಿ.ಬಿ. ಶಿವಪ್ಪ, ಮಲ್ಲಿಕಾರ್ಜುನಯ್ಯ ಸೇರಿ ಹಲವರಿಗೆ ಅನ್ಯಾಯ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಹಲವರ ರಾಜಕೀಯ ಜೀವನ ಅಂತ್ಯಗೊಳಿಸಿದ್ದಾರೆ. ಈಗಲಾದರೂ ಯಡಿಯೂರಪ್ಪ ಮೊಮ್ಮಕ್ಕಳ ಜತೆ ಆಟ ಆಡುತ್ತ ಸಮಯ ಕಳೆಯಲಿ ಎಂದರು.