ಯತ್ನಾಳಗೆ ಬುದ್ದಿ ಭ್ರಮಣೆಯಾಗಿದೆ..!

Yatnala has lost his mind..!
ಶಿವಾನಂದ ಪಾಟೀಲ
Published on

ಬಾಗಲಕೋಟೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಬುದ್ಧಿ ಭ್ರಮಣೆಯಾಗಿದೆ. ಸ್ವ ಪಕ್ಷಿಯರೇ ಅವರಿಗೆ ಗೌರವ ನೀಡಲ್ಲ. ನಾನು ಯಾವುದೇ ಸಂಘ, ಸಂಸ್ಥೆ ಹಾಳು ಮಾಡಿಲ್ಲ. ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿ, ಜನರ ಸೇವೆ ಮಾಡಲು ನಮ್ಮ ಕುಟುಂಬ ಬಂದಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಯತ್ನಾಳ ಅವರನ್ನು ಪ್ರತಿ ಮಾತಿಗೂ ಚುಚ್ಚಿದರು. ನಾನು ಟಿಎಪಿಎಂಎಸ್ ಮೂಲಕ ರಾಜಕೀಯ ಜೀವನ ಆರಂಭಿಸಿದೆ. ನಂತರ ವಿಜಯಪುರ ನಗರಸಭೆ ಅಧ್ಯಕ್ಷನಾದೆ. ನನ್ನ ಅವಧಿಯಲ್ಲಿ ವಿಜಯಪುರ ನಗರಸಭೆಗೆ ಆಸ್ತಿ ಮಾಡಿ ಆದಾಯ ಸೃಷ್ಟಿ ಮಾಡಿದೆ. 37 ಸಾವಿರ ಆಸ್ತಿಗಳು ವಿಜಯಪುರ ನಗರಸಭೆಗೆ ಸೃಷ್ಟಿಸಲಾಯಿತು. ಆದರೆ ಇವರು ಬಂದ ಮೇಲೆ ಕಡಿಮೆ ಬೆಲೆ ಮಾರಾಟ ಮಾಡಿದ್ದಾರೆ ಎಂದು ಕುಟುಕಿದರು.

ಸಿದ್ಧೇಶ್ವರ ಕೋ ಆಪರೇಟಿವ್ ಬ್ಯಾಂಕ್ ಪರಿಸ್ಥಿತಿ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ಮೇಲೆ ಲಾಭದತ್ತ ತೆಗೆದುಕೊಂಡು ಹೋಗಿದ್ದೇನೆ. ವಿಜಯಪುರ- ಬಾಗಲಕೋಟೆ ಜಿಲ್ಲೆಯ ಅನೇಕ ಸಕ್ಕರೆ ಕಾರ್ಖಾನೆಗಳಿಗೆ ಬಂಡವಾಳ ಒದಗಿಸಿ ಕಾರ್ಖಾನೆಗಳ ಬೆಳವಣಿಗೆಗೆ ಕಾರಣಿಭೂತನಾಗಿದ್ದೇನೆ. ಡಿಸಿಸಿ ಬ್ಯಾಂಕ್ 11 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತದೆ. ಶಾಸಕ ಯತ್ನಾಳ ಸಕ್ಕರೆ ಕಾರ್ಖಾನೆ ಮಾಡಿದ್ದಾರೆ. ಅದು ಹೇಗೆ ಮಾಡಿದ್ದಾರೆ ಎನ್ನುವುದು ಹೇಳಲಿ ಎಂದು ಸವಾಲ್ ಹಾಕಿದರು.

ಬಸನವನ ಬಾಗೇವಾಡಿ ಶಾಸಕನಾದ ಮೇಲೆ ಬಹಳಷ್ಟು ಸರ್ಕಾರಿ ಆಸ್ತಿ ಬೆಳೆಸಿದ್ದೇನೆ. ನಗರಸಭೆ, ಪುರಸಭೆಗಳ ಆದಾಯ ಹೆಚ್ಚಿದ್ದೇನೆ. ಎರಡು ಮಂಗಲ ಕಲ್ಯಾಣ ನಿರ್ಮಾಣ ಮಾಡಿದ್ದೇನೆ. ಬಡವರು, ಮಧ್ಯಮ ವರ್ಗಕ್ಕೆ ಅನುಕೂಲವಾಗಿದೆ. ನಾನು ಯಾವುದೇ ಸಂಘ, ಸಂಸ್ಥೆ ಹಾನಿ ಮಾಡಿಲ್ಲ. ನುಂಗಿ ಹಾಕಿಲ್ಲ. ಬಾಗಲಕೋಟೆ ಯಾವುದೇ ಸಂಸ್ಥೆ, ಸಂಘಗಳ ಮೇಲೆ ನನ್ನ ಹಿತಾಸಕ್ತಿ ಇಲ್ಲ. ಯತ್ನಾಳಗೆ ಬುದ್ದಿ ಭ್ರಮಣೆಯಾಗಿದೆ. ಹೀಗಾಗಿ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ. ನಮ್ಮ ಹಾಗೂ ಅವರ ತಂದೆ ವ್ಯವಹಾರದಲ್ಲಿ ಪಾಲುದಾರ ಆಗಿದ್ದರು. ಅವೆಲ್ಲವನ್ನು ಹೇಳುವದಕ್ಕೆ ಆಗುವದಿಲ್ಲ ಎಂದು ತಿಳಿಸಿದರು.

ನಾನು ಯಾರ ಮೇಲೆಯೂ ವೈಯಕ್ತಿಕ ದ್ವೇಷ ಸಾಧಿಸಲ್ಲ. ಸುಮ್ಮನೆ ನನ್ನ ಮೇಲೆ ವೈಯಕ್ತಿಕ ಹೇಳಿಕೆ ನೀಡುತ್ತಾರೆ ಅವರು (ಯತ್ನಾಳ). ಮೊನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂದಾಗ ಅವರಿಗೆ ಎಷ್ಟು ಗೌರವ ಕೊಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಸ್ವಪಕ್ಷದವರೇ ಅವರ ಬಗ್ಗೆ ಗೌರವ ಇಲ್ಲ.
ಶಿವಾನಂದ ಪಾಟೀಲ ಸಕ್ಕರೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net