ಡಿಕೆಶಿ ಸಿಎಂ, ವಿಜಯೇಂದ್ರ ಡಿಸಿಎಂ: ಯತ್ನಾಳ ಹೊಸ ಬಾಂಬ್​

YATNAL
Published on

ಕಲಬುರಗಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ಹೇಳಿಕೆಯೊಂದನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದಕ್ಕೆ ಮುಂದಾಗಿದ್ದರು ಎಂಬ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಕಲಬುರಗಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಯತ್ನಾಳ್ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಬ್ಬರು ದೆಹಲಿಯಲ್ಲಿ ಸಭೆ ನಡೆಸಿ ರಾಜ್ಯದಲ್ಲಿ ಸಿಎಂ, ಡಿಸಿಎಂ ಆಗುವ ಕುರುತು ಚರ್ಚೆ ನಡೆಸಿದ್ದಾರೆ. ಡಿ.ಕೆ ಶಿವಕುಮಾರ್ ಒಂದು ಕಾಲು ಬಿಜೆಪಿಯಲ್ಲಿದೆ. ಅವರ ಹಿಂದೆ ಶಾಸಕರ ಬೆಂಬಲ ಇಲ್ಲ ಎನ್ನುವ ಕಾರಣಕ್ಕೆ ಸುಮ್ಮನಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಜತೆ ದೆಹಲಿಯಲ್ಲಿ ಸಭೆ ನಡೆಸಿ ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ ಹೇಳಿದರು.

ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 69-70 ಕಾಂಗ್ರೆಸ್ ಶಾಸಕರ ಬೆಂಬಲವಿದೆ ಎಂದು ಹೇಳಿದರೂ, “ನಮಸ್ತೆ ಸದಾ ವಾತ್ಸಲ್ಯ” ಎಂಬ ಹಾಡನ್ನು ಹೇಳಿ ಶಾಸಕರಿಗೆ ಭರವಸೆ ನೀಡಿದ್ರು. ಆದರೆ, ಆಂತರಿಕ ವರದಿ ಪ್ರಕಾರ ಕೇವಲ 58 ಶಾಸಕರೇ ಅವರೊಂದಿಗೆ ನಿಂತಿದರು. ಅಲ್ಲದೇ, ಶಿವಕುಮಾರ್ ಜತೆಗಿದ್ದ 10-12 ಶಾಸಕರು ಕೈಜಾರಿ ಹೋಗಿದ್ದಾರೆ. ಹೀಗಾಗಿ, ಬಿಜೆಪಿ ಸರಕಾರ ರಚನೆಗೆ ಮುಂದಾಗಲಿಲ್ಲ ಎಂದರು.

ಡಿಕೆಶಿ ಹಾಗೂ ಬಿಜೆಪಿ ಒಟ್ಟಾಗಿ ಬಂದಿದ್ದರೆ, ಕರ್ನಾಟಕವನ್ನೇ ಮಾರಾಟ ಮಾಡುತ್ತಿದ್ದರು. ಆದ್ದರಿಂದ ನಮ್ಮ ಹೈಕಮಾಂಡ್ ಸ್ಪಷ್ಟವಾಗಿ ಡಿಕೆಶಿ ಬೇಡ, ಅವರ ಜತೆ ಹೊಂದಾಣಿಕೆ ಬೇಡ ಎಂದು ತೀರ್ಮಾನಿಸಿದೆ ಎಂದು ಯತ್ನಾಳ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net