ಸನಾತನ ಧರ್ಮ ದೂಷಿಸುವವರು ನಾಶವಾಗಲಿದ್ದಾರೆ ಎಂದ ಯತ್ನಾಳ್

Basangouda PatilYatnal
Published on

ನರಗುಂದ: ಸನಾತನ ಹಿಂದು ಧರ್ಮವನ್ನು ದೂಷಿಸುವವರು ಕುಷ್ಠರೋಗ ಸೇರಿ ಎಲ್ಲ ರೋಗಗಳಿಗೂ ತುತ್ತಾಗಿ ಸರ್ವನಾಶವಾಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಜನ್ಮದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿರುವ ಉದಯನಿಧಿ ಸ್ಟಾೃಲಿನ್ ಪತ್ನಿ ದೇವಸ್ಥಾನಕ್ಕೆ ಹೋಗಿ ಏಕೆ ಪೂಜೆ ಸಲ್ಲಿಸುತ್ತಾರೆ. ವೋಟ್ ಬ್ಯಾಂಕ್‌ಗಾಗಿ ರಾಹುಲ್ ಗಾಂಧಿಯವರು ನಮಾಜ್ ಮಾಡುವುದು, ದೇವಸ್ಥಾನಕ್ಕೆ ತೆರಳುವುದನ್ನು ಏಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ದೇಶ ವಿರೋಧಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಯತ್ನಾಳ್ ಸಲಹೆ ನೀಡಿದರು.

ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಓಲೈಕೆಗಾಗಿ ಎಸ್ಸಿಎಸ್ಟಿ ಜನಾಂಗದವರ ಅಭಿವೃದ್ಧಿಗೆ ಮೀಸಲಾಗಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಜಾರಿಗೊಳಿಸಿದ್ದ ರೈತ ವಿದ್ಯಾನಿಧಿ, ಫಸಲ್ ಬಿಮಾ ಯೋಜನೆಗಳನ್ನು ಮುಂದುವರಿಸಬೇಕು. 4 ತಿಂಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಈ ಬಗ್ಗೆ ಕಾಂಗ್ರೆಸ್ ಶಾಸಕರೇ ಅಪಸ್ಪರ ಎತ್ತಿದ್ದಾರೆ. ವರ್ಗಾವಣೆಯಲ್ಲೇ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಬರ ಎದುರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿವೃದ್ಧಿ ವಿಷಯಗಳನ್ನು ತಿಳಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net