

ಬೆಳಗಾವಿ: ಎಲ್ಲ ಕ್ಷೇತ್ರಗಳನ್ನು ಜಾರಕಿಹೊಳಿ ಕುಟುಂಬಕ್ಕೆ ಮೀಸಲಿಟ್ಟರೆ ಹಾಲುಮತ, ಲಿಂಗಾಯತ ಸೇರಿ ಇನ್ನುಳಿದವರು ಏನು ಮಾಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.
ಇಲ್ಲಿನ ಭೋಜರಾಜ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯನ್ನೇ ಕಬ್ಜಾ ಮಾಡಲು ಹೊರಟಿರುವ ಜಾರಕಿಹೊಳಿ ಕುಟುಂಬದಿಂದಲೇ ಅಭ್ಯರ್ಥಿ ಮಾಡಿದ್ದರಿಂದ ಕಾಂಗ್ರೆಸ್ ಧುರೀಣರಿಗೂ ಬೇಸರ ತಂದಿದೆ. ಕಾಂಗ್ರೆಸ್‌ನ ಬಹುಪಾಲು ನಾಯಕರೂ ಕೂಡ ಬಿಜೆಪಿ ಅಭ್ಯರ್ಥಿಯನ್ನೇ ಬೆಂಬಲಿಸುತ್ತಾರೆ ಎಂದರು. ಪ್ರತಿ ಚುನಾವಣೆಯಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅವರ ಪ್ರಣಾಳಿಕೆಯಲ್ಲಿ ಒಂದೇ ಒಂದು ಧರ್ಮದ ಪರವಾದ ಅನೇಕ ಅಂಶಗಳಿವೆ. ಕಾಂಗ್ರೆಸ್ ಆಡಳಿತದಿಂದ ದೇಶದಲ್ಲಿ ಅರಾಜಕತೆ ಉಂಟಾಗುವ ಸಂಭವ ಇದೆ ಎಂದರು.
ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಜಮ್ಮು ಕಾಶ್ಮೀರಕ್ಕೆ ನೆಹರು 370ನೇ ವಿಧಿ ಜಾರಿಗೆ ತಂದರು. ಆಗ ಡಾ.ಬಿ.ಆರ್. ಅಂಬೇಡ್ಕರ್ ವಿರೋಧಿಸಿದ್ದರು. ಆದರೂ ನೆಹರು ಈ ವಿಧಿ ಜಾರಿಗೊಳಿಸಿದರು. ಅಂದಿನಿಂದಲೇ ಇದನ್ನು ವಿರೋಧಿಸಿ ನಮ್ಮ ಹಿರಿಯರಾದ ಪಂ.ಶ್ಯಾಮಪ್ರಸಾದ ಮುಖರ್ಜಿ ಹೋರಾಟ ಮಾಡಿದ್ದರು. ಅಂದಿನಿಂದ ಉಳಿದುಕೊಂಡ ಬಂದ 370ನೇ ವಿಧಿಯನ್ನು ಪ್ರಧಾನಿ ಮೋದಿ ರದ್ದುಗೊಳಿಸಿದರು. ಇಂತಹ ಪ್ರಧಾನಿಯನ್ನು ನಾವು ಪುನರಾಯ್ಕೆ ಮಾಡಿ ಭಾರತ ಮತ್ತು ಸನಾತನ ಧರ್ಮ ಉಳಿಸಬೇಕಿದೆ ಎಂದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಉತ್ತರ ಕರ್ನಾಟಕ ಭಾಗದವರು ಸಿಎಂ ಆಗಲಿದ್ದಾರೆ. ಆ ಅದೃಷ್ಟ ನನಗೂ ಏಕೆ ಕೂಡಿಬರಬಾರದು ಎಂದು ಪ್ರಶ್ನಿಸಿದರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿದರು. ಸತೀಶ ಅಪ್ಪಾಜಿಗೋಳ, ಉಮೇಶರಾವ್ ಬಂಟೊಡ್ಕರ್, ಗಿರೀಶ ಬುಟಾಳೆ, ಎಸ್.ಎ. ಮುದಕಣ್ಣವರ, ರವಿ ಪೂಜಾರಿ, ಧರೆಪ್ಪ ಠಕ್ಕಣವರ, ಅಪ್ಪಾಸಾಬ ಅವತಾಡೆ, ರವಿ ಸಂಕ, ಶಿವಪ್ರಸನ್ನ ಹಿರೇಮಠ, ಪ್ರಭಾಕರ ಚವಾಣ, ಸದಾಶಿವ ಕೊಂಪಿ, ಸತ್ಯಪ್ಪ ಬಾಗೆನ್ನವರ, ಅನಿಲ ಸೌದಾಗರ, ಶಶಿ ಸಾಳ್ವೆ, ರಮೇಶ ಪಾಟೀಲ ಇತರರಿದ್ದರು.