

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರೇ ಅಲ್ಲ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯತ್ನಾಳ್ ಅವರಿಗೆ ಉಪಪಂಗಡಗಳ ಬಗ್ಗೆ ಮಾಹಿತಿ ಕೊರತೆ ಇದ್ದು, ಅವುಗಳ ಪರಿಚಯ ಮಾಡಿಕೊಡಲು ಮಹಾಸಭಾ ಸಿದ್ಧವಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎನ್.ರುದ್ರಮುನಿ ಸಜ್ಜನ್ ಪ್ರತಿಕ್ರಿಯಿಸಿದ್ದಾರೆ.
ವೀರಶೈವ ಮಹಾಸಭಾದಲ್ಲಿ 87 ಉಪಪಂಗಡಗಳಿವೆ. ಇದರಲ್ಲಿ ಬಳೆ ಶೆಟ್ಟರ್ ಪಂಗಡವೂ ಒಂದು. ಮಾಜಿ ಸಿಎಂ ಯಡಿಯೂರಪ್ಪ ಅವರ ಉಪಪಂಗಡದ ಬಗ್ಗೆ ಯತ್ನಾಳ್ ಅವರಿಗೆ ಮಾಹಿತಿ ಕೊರತೆ ಇದೆ. ಯತ್ನಾಳ್ ಅವರಿಗೆ ಮಾಹಿತಿ ಇಲ್ಲದಿದ್ದರೆ ಮಹಾಸಭಾದಿಂದ ಉಪಪಂಗಡಗಳ ಪಟ್ಟಿ ಕಳುಹಿಸಿಕೊಡುತ್ತೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಒಂದೇ ಸಮಾಜಕ್ಕೆ ಸೀಮಿತವಾಗಿ ಕೆಲಸ ಮಾಡಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಅವರಿಗೆ ಯತ್ನಾಳ್ ಜಾತಿ ಬಣ್ಣ ಕಟ್ಟಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರು ಬಳೆ ಶೆಟ್ಟರ್ ಪಂಗಡದವರು ಎಂಬುದು ನಿಜ. ಬಳೆ ಶೆಟ್ಟರ್ ಕೂಡ 87 ಉಪಪಂಗಡಳಲ್ಲಿ ಒಂದು ಎಂಬುದು ಯತ್ನಾಳ್‌ಗೆ ಗೊತ್ತಿಲ್ಲ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಳೆ ಶೆಟ್ಟರ್ ಪಂಗಡಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಬಳೆ ಶೆಟ್ಟರ್ ಪಂಗಡದವರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ವೀರಶೈವ ಲಿಂಗಾಯತರಲ್ಲಿ ಅವರವರ ಕಸುಬಿಗೆ ತಕ್ಕಂತೆ ಉಪಪಂಗಡಗಳಿವೆ. ಅವರು ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆಯೂ ಯತ್ನಾಳ್ ಅವರಿಗೆ ಅರಿವಿಲ್ಲ. ಅವರಿಗೆ ಕೇವಲ ಪಂಚಮಸಾಲಿ ಸೇರಿ ಎರಡ್ಮೂರು ಉಪಪಂಗಡಗಳು ಮಾತ್ರ ಗೊತ್ತಿವೆ ಎಂದು ಲೇವಡಿ ಮಾಡಿದರು.
ಮಹಾಸಭಾದ ಪ್ರಮುಖರಾದ ಸಂತೋಷ್ ಬಳ್ಳಕೆರೆ, ತಮ್ಮಡಿಹಳ್ಳಿ ನಾಗರಾಜ್, ವಿರೂಪಾಕ್ಷಪ್ಪ, ಪಾರ್ವತಮ್ಮ, ಶಾಂತಾ ಆನಂದ್, ರತ್ನಮ್ಮ, ಶಿವರಾಜ್, ಚಂದ್ರಯ್ಯ, ತಿಪ್ಪೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಶಾಮನೂರು ಬ್ಲ್ಯಾಕ್‌ಮೇಲರ್ ಅಲ್ಲ
ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಬಸನಗೌಡ ಪಾಟೀಲ್ ಯತ್ನಾಳ್ ಬ್ಲ್ಯಾಕ್‌ಮೇಲರ್ ಎಂದು ಕರೆದಿದ್ದಾರೆ. ಸಿಎಂ ಸ್ಥಾನಕ್ಕಾಗಿ ಪಕ್ಷವನ್ನು ಬ್ಲಾೃಕ್‌ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್ ಪಕ್ಷವನ್ನು ಬ್ಲಾೃಕ್‌ಮೇಲ್ ಮಾಡಿ ಸಿಎಂ ಆಗಬೇಕಿಲ್ಲ ಎಂದು ರುದ್ರಮುನಿ ಸಜ್ಜನ್ ಟಾಂಗ್ ನೀಡಿದರು. ಶಾಮನೂರು ಶಿವಶಂಕರಪ್ಪ ಅವರ ಕುರಿತಾದ ಹೇಳಿಕೆಯನ್ನೂ ಮಹಾಸಭಾ ಖಂಡಿಸುತ್ತದೆ. ಅವರ ಆರೋಪಗಳಿಗೆ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಉತ್ತರ ಕೊಡಲಿದ್ದಾರೆ ಎಂದರು.