ಎಷ್ಟೋ ಕೋರ್ಟ್‌ಗಳು ಕೇಂದ್ರ ಸರ್ಕಾರ ಹೇಳುವ ರೀತಿಯಲ್ಲಿ ತೀರ್ಪು ನೀಡುವ ಪರಿಸ್ಥಿತಿ ನಿರ್ಮಾಣ : ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಕಳವಳ

Yathindra Siddaramaiah
Published on

ಮೈಸೂರು: ಕೇಂದ್ರದ ತನಿಖಾ ಸಂಸ್ಥೆಗಳು ಹಾಗೂ ರಾಜ್ಯಪಾಲರ ಕಚೇರಿಗಳು ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ದುರಾದೃಷ್ಟವಶಾತ್ ಎಷ್ಟೋ ಕೋರ್ಟ್‌ಗಳು ಸಹ ಕೇಂದ್ರ ಸರ್ಕಾರ ಹೇಳುವ ರೀತಿಯಲ್ಲಿ ತೀರ್ಪು ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಸೋಸಲೆ ಹೋಬಳಿಯ ಹೊರಳಹಳ್ಳಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಆವರಣದಲ್ಲಿ ಬುಧವಾರ ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 470 ಕೋಟಿ ರೂ.ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ, ಕಟ್ಟಡಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಎದುರಿಸಲು ಸಿದ್ಧರಿದ್ದೇವೆ. ಆದರೆ, ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು ನಿಷ್ಪಪಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲ. ಏಕೆಂದರೆ ತನಿಖೆ ನಡೆಸುತ್ತಿರುವ ಇಡಿ, ಐಟಿ, ಸಿಬಿಐ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಹಾಗೆ ಕುಣಿಯುವ ಸಂಸ್ಥೆಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರ ಹೇಳುವ ಹಾಗೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನಾವು ಎಲ್ಲಿ ಹೋಗಿ ನ್ಯಾಯ ಕೇಳಬೇಕು? ನಮ್ಮ ವಿರುದ್ಧ ಪ್ರತಿಪಕ್ಷದವರು ಸುಳ್ಳು ಆರೋಪಗಳನ್ನು ಹೊರಿಸಿದಾಗ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿರುತ್ತೇವೆ. ತನಿಖಾ ಸಂಸ್ಥೆಗಳು ನಿಷ್ಪಪಕ್ಷಪಾತವಾಗಿ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ಆಸೆ ಇಟ್ಟುಕೊಂಡಿರುತ್ತೇವೆ. ಆದರೆ, ಎಲ್ಲ ಸಂಸ್ಥೆಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಎಲ್ಲೂ ನಮಗೆ ನ್ಯಾಯ ಸಿಗುವುದಿಲ್ಲ. ಹಾಗಾಗಿ ಅಂತಿಮವಾಗಿ ನಾವು ಜನತಾ ನ್ಯಾಯಾಲಯದ ಬಳಿ ಹೋಗಬೇಕಾಗಿದೆ. ಜನರ ಆಶೀರ್ವಾದ ಇರುವರೆಗೆ ಯಾವುದೇ ಷಡ್ಯಂತ್ರಗಳಿಗೆ ನಾವು ಹೆದರುವುದಿಲ್ಲ ಎಂದು ಗುಡುಗಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಬಲಿಷ್ಠವಾಗಲಿದ್ದು, ಮುಂದೆಯೂ ನಮಗೆ ಗೆಲುವು ಕಷ್ಟಸಾಧ್ಯ ಎಂದು ಅರಿತು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ನಮ್ಮ ಸರ್ಕಾರವನ್ನು ವಾಮ ಮಾರ್ಗದಿಂದ ಅಸ್ಥಿರ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಅವರನ್ನು ಅಧಿಕಾರ ದಿಂದ ಕೆಳಗಿಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net