

ಮಡಿಕೇರಿ:
ಸ್ವಚ್ಛ ಕಾವೇರಿಗಾಗಿ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಅಖಿಲ ಭಾರತೀಯ ಸನ್ಯಾಸಿ ಸಂಘ ಆಶ್ರಯದಲ್ಲಿ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದೊಂದಿಗೆ ತಲಕಾವೇರಿಯಿಂದ ಪೂಂಪ್ ಹಾರ್ ತನಕ 3 ವಾರಗಳ ಕಾಲ ನಡೆಯಲಿರುವ ಯಾತ್ರೆಗೆ ಬೆಂಗಳೂರು ಕೈಲಾಸ ಆಶ್ರಮದ ಜಗದ್ಗುರು ಶ್ರೀ ಜಯಂದ್ರ ಪುರಿ ಸ್ವಾಮೀಜಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ದೇಶದ ನದಿಗಳ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸಬೇಕಾಗಿದೆ. ರಾಜ್ಯ ಸರ್ಕಾರಗಳು ನದಿ ಸಂರಕ್ಷಣೆ ಬಗ್ಗೆ ಯೋಜನೆ ರೂಪಿಸಬೇಕು. ದಕ್ಷಿಣ ಉತ್ತರ ಎಂಬ ಭೇದವಿಲ್ಲದೆ ದೇಶದ ಎಲ್ಲಾ ನದಿಗಳ ಸಂರಕ್ಷಣೆ ಆಗಬೇಕಾಗಿದೆ. ಕಾವೇರಿ ನದಿಗೆ ಇಳಿಯುವ ಸಂದರ್ಭ ಮಡಿವಂತಿಗೆ ಅಗತ್ಯ ಎಂದರು.
ಯಾತ್ರೆಯ ಬಿತ್ತಿ ಪತ್ರ ಬಿಡುಗಡೆಗೊಳಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷÀ ಅಜ್ಜನಿಕಂಡ ಮಹೇಶ್ ನಾಚಯ್ಯ ಮಾತನಾಡಿ ನಾಡಿನ ನದಿಗಳು ಜೀವನಾಡಿಗಳಾಗಿದ್ದು ಮನಕುಲದ ಉಳಿವಿಗೆ ಜೀವ ಜಲವಾಗಿದೆ. ಜೀವನದಿ ಕಾವೇರಿ ಕಲುಷಿತ ಆಗದಂತೆ ಕಳೆದ 15 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಸ್ವಚ್ಛತೆಯ ಗುರಿ ಸಾಧಿಸುತ್ತಿರುವುದು ಶ್ಲಾಘನೀಯ. ನದಿ ತೀರದ ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕಾಗಿದೆ. ನೈಸರ್ಗಿಕ ಸಂಪತ್ತು ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಸ್ವಾಮಿ ಶಿವರಾಮನಂದ ಮಾತನಾಡಿ ಸ್ವಚ್ಚ ಕಾವೇರಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಮೂರು ವಾರಗಳ ಕಾಲ ಯಾತ್ರೆ ನಡೆಲಿದ್ದು ತಲಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥವನ್ನು ರಥದಲ್ಲಿ ತೆಗೆದುಕೊಂಡು ಹೋಗುವ ಮೂಲಕ ನದಿ ತಟದ ಜನರಿಗೆ ನದಿ ಸಂರಕ್ಷಣೆ ಬಗ್ಗೆ ಅರಿವು ಜಾಗೃತಿ ಮೂಡಿಸಲಾಗುವುದು. ನ. 16ರಂದು ನದಿ ಸಮುದ್ರ ಸೇರುವ ಸಂಗಮದಲ್ಲಿ ಪವಿತ್ರ ತೀರ್ಥಕ್ಕೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಗುವುದು. ನದಿಯ ವಾಸ್ತವಾಂಶ ಬಗ್ಗೆ ಸರ್ಕಾರಗಳಿಗೆ ಸಮಗ್ರ ಮಾಹಿತಿ ಸಲ್ಲಿಸಲಾಗುವುದು ನದಿ ಸಂರಕ್ಷಣೆಗೆ ಯೋಜನೆಗಳನ್ನು ರೂಪಿಸಲು ಆಗ್ರಹಿಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಇತ್ತೀಚಿನ ದಿನಗಳಲ್ಲಿ ನದಿ ನೀರಿನ ಗುಣಮಟ್ಟ ಏರುಪೇರು ಆಗುತ್ತಿದ್ದು ಮನುಷ್ಯರು ಬಳಕೆ ಮಾಡಲು ಯೋಗ್ಯವಲ್ಲ ಎನ್ನುವ ವರದಿಗಳು ಹೊರಬಿದ್ದಿವೆ. ಈ ಸಂಬAಧ ಸರ್ಕಾರ ನದಿ ಸಂರಕ್ಷಣೆಗೆ ಕಟ್ಟುನಿಟ್ಟಿನ ಕಾನೂನು ರೂಪಿಸಿ ಅನುಷ್ಠಾನಗೊಳಿಸಬೇಕು. ಆ ಮೂಲಕ ನದಿ ನೀರಿನ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.
ನಂತರ ತಲಕಾವೇರಿಯಿಂದ ಆರಂಭಗೊAಡ ಯಾತ್ರಾ ತಂಡ ಭಾಗಮಂಡಲ ಕಾವೇರಿ ಸಂಗಮದಲ್ಲಿ ಪೂಜೆ ಸಲ್ಲಿಸಿ ಕಾವೇರಿ ಮಾತೆಗೆ ಅಭಿಷೇಕ ಮಾಡಲಾಯಿತು.
ಕಾವೇರಿ ಜಾಗೃತಿ ಯಾತ್ರೆ ಸಮಿತಿಯ ಸಂಯೋಜಕ ಚಿ.ನಾ. ಸೋಮೇಶ್, ಅಖಿಲ ಭಾರತ ಸನ್ಯಾಸಿ ಸಂಘದ ಸ್ಥಾಪಕ ಶ್ರೀ ರಮಾನಂದ ಮಹಾರಾಜ್, ಸನ್ಯಾಸಿ ಸಂಘದ ಪ್ರಮುಖರಾದ ಸ್ವಾಮಿ ಆತ್ಮಾನಂದ ಸರಸ್ವತಿ, ಸ್ವಾಮಿ ವೇದಾನಂದ, ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಪಾರುಪತ್ಯಗಾರ ಕೋಡಿ ಮಹೇಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ತಮಿಳುನಾಡು ಪ್ರಾಂತದ ಸಂಚಾಲಕ ವಾಸು ರಾಮಚಂದ್ರನ್, ನಮಾಮಿ ಕಾವೇರಿ ಕೊಡಗು ಜಿಲ್ಲಾ ಅಧ್ಯಕ್ಷೆ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ ಸುಮನ ಮಳಲ ಗದ್ದೆ ಮತ್ತು ಪ್ರಮುಖರು ಇದ್ದರು.