

ಮೈಸೂರು: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಭರವಸೆಗಳನ್ನು ಈಡೇರಿಸಿರುವುದರಿಂದ ಈ ಬಾರಿ ಮತದಾರರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್‌ಬೋಸ್ ಅವರನ್ನು ಬೆಂಬಲಿಸಬೇಕು ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಳಿಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಅನ್ಯಾಯವನ್ನೇ ಮಾಡಿಕೊಂಡು ಬರುತ್ತಿದೆ. ರಾಜ್ಯದ ತೆರಿಗೆಯ ಪಾಲನ್ನು ಕೊಡುತ್ತಿಲ್ಲ, ಬರ ಪರಿಹಾರ ನೀಡುತ್ತಿಲ್ಲ. ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಸಹ ರಾಜ್ಯದ 26 ಸಂದರು ಪ್ರಧಾನಿ ನರೇಂದ್ರ ಮೋದಿ ಮುಂದೆ ಮಾತನಾಡುವ ಧೈರ್ಯ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಆಡಳಿತದ ವೈಫಲ್ಯಗಳನ್ನು ಯಾವ ಟಿವಿಯವರೂ ಸಹ ಚರ್ಚೆ ಮಾಡುತ್ತಿಲ್ಲ. ಶ್ರೀಮಂತರ 25 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಆಸಕ್ತಿ ತೋರುತ್ತಿಲ್ಲ. ಬಡವರ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಯನ್ನು ತೊಲಗಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಸುನಿಲ್ ಬೋಸ್ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಅನುಕೂಲ ಮಾಡಿಕೊಟ್ಟಿದೆ. ಯಾರು ಸಹ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ನೀಡಿದ್ದಾರೆ. ವರುಣ ಕ್ಷೇತ್ರದ ಜನರು ಸಿದ್ದರಾಮಯ್ಯ ಹಾಗೂ ಡಾ.ಯತೀಂದ್ರ ಅವರನ್ನು ಗೆಲ್ಲಿಸಿದಂತೆ ಈ ಬಾರಿ ನನಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಕಾಂಗ್ರೆಸ್ ಮುಖಂಡರಾದ ಎಸ್.ಸಿ. ಬಸವರಾಜು, ಲತಾಸಿದ್ದಶೆಟ್ಟಿ, ರಂಗಸ್ವಾಮಿ, ಮಂಜುಳಾ ಮಂಜುನಾಥ್, ಮಾರ್ಬಳ್ಳಿ ಕುಮಾರ್, ಕುಮಾರ್ ಹಾಗೂ ಇತರರು ಇದ್ದರು.